ಸುದ್ದಿಮೂಲ ವಾರ್ತೆ
ರಾಮನಗರ,ಜೂ.17: ರಾಜ್ಯ ಆರ್ಯವೈಶ್ಯ ಮಹಸಭಾ ವತಿಯಿಂದ ಲೋಕಸೇವಾ ಆಯೋಗ ನಡೆಸುವ ಐ.ಎ.ಎಸ್ ಮತ್ತು ಐ.ಪಿ.ಎಸ್ ಪರೀಕ್ಷೆಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಿದೆ.
ಅಕಾಡೆಮಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ 25 ಅಭ್ಯರ್ಥಿಗಳಿಗೆ ಸಂಪೂರ್ಣ ಉಚಿತ ತರಬೇತಿ ನೀಡಲಾಗುವುದು ಎಂದು ಮಹಾಸಭಾದ ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಕೆ.ಬಾಲಾಜಿ ತಿಳಿಸಿದರು.
ನಗರದ ಶ್ರೀ ಕನ್ನಿಕಾಮಹಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಲಕ್ಷ ರೂ. ವೆಚ್ಚ ಮಾಡಬೇಕಾಗಿದೆ. ಮುಂದಿನ ಹಂತದ ತರಬೇತಿ ಪಡೆಯಲು ದೆಹಲಿಗೆ ತೆರಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾಸಭಾದ ತರಬೇತಿ ಮುಖ್ಯ ಎಂದರು.
ಕೆ.ಎ.ವಿ.ಎಂ.ಎಸ್ ಜಿಲ್ಲಾ ನಿರ್ದೇಶಕ ಹಾಗೂ ವಿಭಾಗೀಯ ಕಾರ್ಯದರ್ಶಿ ಕೆ.ವಿ.ಪ್ರಸನ್ನ ಕುಮಾರ್ ಮಾತನಾಡಿ, ಮಹಾಸಭಾದ ವತಿಯಿಂದ ವಾಸವಿ ಅಕಾಡೆಮಿ ಸ್ಥಾಪನೆಯಾಗಿದ್ದು, ಸತತ 5 ವರ್ಷಗಳಿಂದ ತರಬೇತಿ ನೀಡುತ್ತಿದೆ. 2024ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯಲಿಚ್ಚಿಸುವ ಅಭ್ಯರ್ಥಿಗಳು ತರಬೇತಿ ಪಡೆಯಲು ಇದು ಸದಾವಕಾಶ. ವಾಸವಿ ಅಕಾಡೆಮಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಊಟ, ವಸತಿ ಸೌಲಭ್ಯ ಸೇರಿ ತರಬೇತಿ, ಮಾರ್ಗದರ್ಶನ ಸಂಪೂರ್ಣ ಉಚಿತವಾಗಿದೆ ಎಂದು ಮಾಹಿತಿ ನೀಡಿದರು.
ತರಬೇತಿಗಾಗಿ ಅರ್ಜಿ ಸಲ್ಲಿಸಲು ಇದೇ 25 ರಂದು ಕೊನೆಯ ದಿನ. ಪ್ರವೇಶ ಪರೀಕ್ಷೆಯು ಜು. 2 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಅದೇ ದಿನ ಮೌಖಿಕ ಪರೀಕ್ಷೆಯೂ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 80734 99217 ಸಂಪರ್ಕಿಸಬಹುದು. ಕರ್ನಾಟಕ ಆರ್ಯ ವೈಶ್ಯ ಮಹಾಸಭಾ, ಶೇಷಾದ್ರಿ ರಸ್ತೆ, ಗಾಂಧಿನಗರ, ಬೆಂಗಳೂರು ಇಲ್ಲಿಗೆ ಭೇಟಿ ನೀಡಬಹುದು
ಗೋಷ್ಠಿಯಲ್ಲಿ ಕೆ.ಎ.ವಿ.ಎಂ.ಎಸ್ ಜಿಲ್ಲಾ ನಿರ್ದೇಶಕ ಬಿ.ಎಸ್.ಗೋಪಾಲ್, ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಕೆ.ಬಾಲಾಜಿ, ಪ್ರಧಾನ ಕಾರ್ಯದರ್ಶಿ ಪಿ.ಬಿ.ವೆಂಕಟೇಶ್ ಬಾಬು, ಸಹ ಕಾರ್ಯದರ್ಶಿ ರಶ್ಮಿ.ಎನ್. ರಾಮನಗರ ಆರ್ಯ ವೈಶ್ಯ ಸಭಾದ ಅಧ್ಯಕ್ಷ ಪಿ.ಜಿ.ಹರಿನಾಥ್, ಕಾರ್ಯದರ್ಶಿ ಪಿ.ವಿ.ಬದರಿನಾಥ್ ಉಪಸ್ಥಿತರಿದ್ದರು.