ಸುದ್ದಿಮೂಲ ವಾರ್ತೆ
ತುಮಕೂರು, ಸೆ.21 : ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಸರ್ಕಾರ ಮೀಸಲಿಟ್ಟಿರುವ ಅನುದಾನವನ್ನು ನಿಗದಿತ ಕಾಲಮಿತಿಯೊಳಗೆ ಬಳಸುವಂತೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡದ ಉಪಯೋಜನೆ ಅನುಷ್ಠಾನ ಅಧಿನಿಯಮಗಳಡಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಪ್ರಗತಿ ವರದಿಯ ಮಾಹಿತಿ ಪಡೆದ ಅವರು, ಪ.ಜಾತಿ ಮತ್ತು ಪ.ಪಂಗಡಗಳ ಜನರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇಲಾಖೆಗಳು ವಿಳಂಬ ಮಾಡದೇ ಇನ್ನು ಒಂದು ವಾರದೊಳಗೆ ನಿಯಮಾನುಸಾರ ಫಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆಗಳನ್ನು ಶೇ.100ರಷ್ಟು ಜನಪರವಾಗಿ ಅನುಷ್ಠಾನ ಮಾಡಿ, ಯೋಜನೆಗಳಲ್ಲಿ ಪ.ಜಾತಿ ಹಾಗೂ ಪ.ಪಂಗಡದ ಅರ್ಹರಿಗೆ ಸೌಲಭ್ಯಗಳು ತಲುಪಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಫಲಾನುಭವಿಗಳ ಆಯ್ಕೆ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.
ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಿ.ಪ್ರಭು ಮಾತನಾಡಿ, ಪ್ರತಿ ಇಲಾಖೆಗಳ ಮಾಹಿತಿ ವಿವರಣಾತ್ಮವಾಗಿ ಇರಬೇಕು, ಪ್ರಸಕ್ತ ಸಾಲಿನ ಎಲ್ಲಾ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಗಳನ್ನು ಆಯಾ ಮಾಹೆಯ ಅಂತ್ಯಕ್ಕೆ ಪೂರ್ಣವಾಗಿ ಜಾರಿಗೊಳಿಸಿಬೇಕು ಎಂದು ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತೆ ಆಶ್ವಿಜ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪ, ವ್ಯವಸ್ಥಾಪಕ ಸೋಮಶೇಖರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ಡಿ.ಎನ್, ಜಿಲ್ಲಾ ಕಾರ್ಮಿಕಾಧಿಕಾರಿ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು