ಕುಷ್ಟಗಿ,ಜು.28:ಕುಷ್ಟಗಿ ಪಟ್ಟಣದಲ್ಲಿ ಇಂದು ಭಾರತ ಕಂಡ ಶ್ರೇಷ್ಠ ವಿಜ್ಞಾನಿ, ಮಿಸೈಲ್ ಮ್ಯಾನ್, ಭಾರತ ರತ್ನ, ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ 8ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು.
ಪಟ್ಟಣದ ಗಜೇಂದ್ರಗಡ ಮುಖ್ಯರಸ್ತೆ ಬಳಿ ಇರುವ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ವೃತ್ತದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಯುವಕರು ಸಮಾವೇಶಗೊಂಡು ಡಾ ಎ ಪಿ ಜೆ ಅಬ್ದುಲ್ ಕಲಾಂರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು. ಬಳಿಕ ಮೇಣದಬತ್ತಿ ಬೆಳಗಿಸುವ ಮೂಲಕ ಅವರ ಸ್ಮರಣೆ ಮಾಡಿದರು.
ಈ ವೇಳೆ ಜನಪದ ಕಲಾವಿದ ಡಾ. ಜೀವನಸಾಬ ಬಿನ್ನಾಳ ಅವರು ಮಾತನಾಡಿ, ಇವತ್ತಿನ ನಮ್ಮ ಇಂದಿನ ದಿನವನ್ನು ತ್ಯಾಗ ಮಾಡಿದರೆ ನಮ್ಮ ಮಕ್ಕಳ ನಾಳೆಗೆ ಸುಂದರ ಬದುಕು ಕಟ್ಟಿಕೊಡಲು ಸಾಧ್ಯ ಎಂದು ಹೇಳುತ್ತಿದ್ದ ಕಲಾಂ ಅವರು ಭಾರತದ ನಿಜವಾದ ಭಾರತರತ್ನ ಆಗಿದ್ದಾರೆ. 1997ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಸೇರಿದಂತೆ ಹತ್ತು ಹಲವು ಪ್ರಶಸ್ತಿ, ಪಾರಿತೋಷಕಗಳನ್ನು ಪಡೆದುಕೊಂಡಿದ್ದ ಕಲಾಂ ಅವರ ಚಿಂತನೆಗಳು ಸರ್ವಕಾಲಕ್ಕೂ ಸ್ಫೂರ್ತಿದಾಯಕ ಆಗಿವೆ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ್ ಪತ್ತಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಶ್ ಬಂಗಾರಶೆಟ್ಟರ್, ರೈತ ಸಂಘಟನೆ ಪ್ರಮುಖ ನಜೀರಸಾಬ ಮೂಲಿಮನಿ ಹಾಗೂ ಆರ್ ಟಿ ಸುಬಾನಿ ಅವರು ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಸಾಧನೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ವೇಳೆ ಗುತ್ತಿಗೆದಾರ ಪ್ರಭುರಾಜ ಪಾಟೀಲ್, ಮಾಹಿಬೂಬ್ ನೆರೆಬೆಂಚಿ, ನಿಜಾಮ್ ಕಪಾಲಿ, ಬಬಲೂ ಅತ್ತಾರ, ರಾಘವೇಂದ್ರ ಡಂಬರ್, ಸಂತೋಷ ಗುಜ್ಜಲ್, ರವಿ ತಾಳದ, ಇಸ್ಮಾಯಿಲ್ ಅತ್ತಾರ, ಫರೋಕ್ ಚೌದ್ರಿ, ಜಿಲಾನ್, ವಾಸಿಮ್ ಖಾನ್, ಎಚ್ ವಾಯ್ ನದಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.