ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 18: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ತಾಲ್ಲೂಕು, ದಾಸನಪುರ ಹೋಬಳಿ ಹುಣ್ಣಿಗೆರೆ ಗ್ರಾಮದ ಸರ್ವೆ ನಂ.35 ರಲ್ಲಿ ವಿಲ್ಲಾ ಮಾದರಿಯ ವಸತಿ ಯೋಜನೆಯನ್ನು ಹಾಗೂ ಒಂದು ಬಿಎಚ್ಕೆ ಮನೆಗಳನ್ನು ಹಂಚಿಕೆ ಮಾಡಲು ಸಿದ್ಧತೆ ನಡೆಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಜಿ. ಕುಮಾರ ನಾಯಕ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಈ ವಸತಿ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಸಾರ್ವಜನಿಕರಿಗೆ ಹಂಚಿಕೆ ಮಾಡಬೇಕು ಎಂದು ಸೂಚನೆ ನೀಡಿದರು.
ಈ ವಸತಿ ಯೋಜನೆಯಡಿ 1ಬಿಎಚ್ಕೆಯ 320 ಮನೆಗಳು, 3 ಬಿಎಚ್ಕೆ ಹೊಂದಿರುವ 152 ಮನೆಗಳು ಹಾಗೂ 4 ಬಿಎಚ್ಕೆ ಇರುವ 170 ಮನೆಗಳು ಇರುತ್ತವೆ. ಈ ವಸತಿ ಯೋಜನೆಯಲ್ಲಿನ 3 ಮತ್ತು 4 ಬಿಎಚ್ಕೆ ಮನೆಗಳು ಆರ್ಸಿಸಿ ಫ್ರೇಮ್ ಸ್ಟ್ರಕ್ಚರ್ನಲ್ಲಿ ನಿರ್ಮಿಸಿದ್ದು, ಈ ಮನೆಗಳು ಡೂಪ್ಲೆಕ್ಸ್ ಮನೆಗಳಾಗಿರುತ್ತವೆ. ಈ ಮನೆಗಳ ಕಟ್ಟಡಕ್ಕೆ ಪೂರ್ತಿ ಇಟ್ಟಿಗೆಯನ್ನು ಉಪಯೋಗಿಸಲಾಗಿರುತ್ತದೆ. ಈ ವಸತಿ ಯೋಜನೆಯನ್ನು ವಾಸ್ತುವಿಗನುಗುಣವಾಗಿ ನಿರ್ಮಿಸಲಾಗಿರುತ್ತದೆ. ಅದರಂತೆ, ಒಳಾಂಗಣವನ್ನು ಕಲ್ಪಿಸಲಾಗಿದೆ. ಪ್ರತಿ ಮನೆಗೆ ಡ್ಯುಯೆಲ್ ಪೈಪಿಂಗ್ ಸಿಸ್ಟಂ, ಸಂಪು ಮತ್ತು ಓವರ್ ಹೆಡ್ ಟ್ಯಾಂಕಿರುತ್ತದೆ ಮತ್ತು ಸೋಲಾರ್ ವಾಟರ್ ಹಿಟರ್ ಅನ್ನು ಅಳವಡಿಸಲಾಗಿರುತ್ತದೆ.
1 ಬಿಎಚ್ಕೆ ಮನೆಗಳನ್ನು ಆರ್ಸಿಸಿ ಗೋಡೆಗಳನ್ನು ಅಳವಡಿಸಿ ಜಿ+3 ಮಹಡಿಯಲ್ಲಿ ನಿರ್ಮಿಸಲಾಗಿರುತ್ತದೆ. 3 ಮತ್ತು 4 ಬಿಎಚ್ಕೆಗಳಿಗೆ ಪ್ರತ್ಯೇಕವಾದ ಗೇಟ್ಗಳನ್ನು ಅಳವಡಿಸಿ, ಮುಖ್ಯರಸ್ತೆಯಿಂದ ಪ್ರತ್ಯೇಕವಾಗಿ ಸಂಪರ್ಕ ಕಲ್ಪಿಸಲಾಗಿರುತ್ತದೆ. 3 ಮತ್ತು 4 ಬಿಎಚ್ಕೆ ಮನೆಗಳಿಗೆ ಇ.ವಿ (ಕಾರ್ ಚಾರ್ಜಿಂಗ್) ಚಾರ್ಜಿಂಗ್ ಮಾಡಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಎಲ್ಲಾ ಮನೆಗಳಿಗೂ ಮನೆಯಲ್ಲಿಯೇ ಕಾರ್ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಹಾಗೂ ಈ ಯೋಜನೆಯಲ್ಲಿ 100ಕೆವಿ ಸಾಮರ್ಥ್ಯದ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಲಾಗಿರುತ್ತದೆ ಹಾಗೂ ಮಳೆ ನೀರು ಕುಯ್ಲಿಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಈ ಯೋಜನೆಯಲ್ಲಿ ಡಕ್ಟ್ ಗಳನ್ನು ನಿರ್ಮಿಸಿ, ಅದರಲ್ಲಿ ನೀರಿನ ಹಾಗೂ ವಿದ್ಯುತ್ ಕೇಬಲ್ ಗಳನ್ನು ಅಳವಡಿಸಲಾಗಿರುತ್ತದೆ.
ಈ ವಸತಿ ಯೋಜನೆಯಲ್ಲಿ 27 ಉದ್ಯಾನವನಗಳಿದ್ದು, ಹಸಿರಿನ ಗಿಡಮರಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಈ ವಸತಿ ಯೋಜನೆಯನ್ನು 26 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಿದ್ದು, ಈ ವಸತಿ ಯೋಜನೆಯ ಸುತ್ತ 2.1 ಮೀ ಎತ್ತರದ ರಕ್ಷಣಾ ಗೋಡೆಯನ್ನು ನಿರ್ಮಿಸಲಾಗಿರುತ್ತದೆ.
ವಸತಿ ಯೋಜನೆಯ ಸುತ್ತ ರಸ್ತೆಯನ್ನು ಮಾಡಲಾಗಿರುತ್ತದೆ. ಹಾಗೂ ಈ ವಸತಿ ಯೋಜನೆಯಲ್ಲಿ ಮನೋರಂಜನಾ ಕೇಂದ್ರವನ್ನು ನಿರ್ಮಿಸಿದ್ದು, ಈ ಕೇಂದ್ರದಲ್ಲಿ ಒಳಾಂಗಣ ಆಟಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಒಳಾಂಗಣ ಸೆಟಲ್ ಕೋರ್ಟ್, ರೆಸ್ಟೊರಂಟ್, ಜಿಮ್, ಏರೋಬಿಕ್ಸ್, ಪ್ರಾಥಮಿಕ ಆರೋಗ್ಯ ಕೇಂದ್ರ, ಕಮ್ಯೂನಿಟಿ ಹಾಲ್, ಗ್ರಂಥಾಲಯ, ಈಜುಕೊಳ ನಿರ್ಮಿಸಲಾಗಿದೆ ಹಾಗೂ ಸೂಪರ್ ಮಾರ್ಕೆಟ್ ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಮತ್ತು ಅತಿಥಿಗಳಿಗಾಗಿ 4 ಕೊಠಡಿಗಳನ್ನು ಕಲ್ಪಿಸಲಾಗಿದೆ.