ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.31: ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಕೆ ಎಸ್ ಆರ್ ಟಿ ಸಿ ಯ ನೌಕರರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಮೊತ್ತವನ್ನು ರೂ. 3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ.
ಕೆ ಎಸ್ ಆರ್ ಟಿ ಸಿ ಯಲ್ಲಿ ಈಗಾಗಲೇ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆಯಡಿ, 1 ಕೋಟಿ ರೂ. ಮೊತ್ತದ ಆರ್ಥಿಕ ಪರಿಹಾರ ಒದಗಿಸುತ್ತಿದ್ದು, ಇಲ್ಲಿಯವರೆಗೆ 7 ಪ್ರಕರಣಗಳಲ್ಲಿ ಅಪಘಾತದಿಂದ ಮರಣ ಹೊಂದಿದ ನೌಕರರ ಅವಲಂಬಿತರಿಗೆ ತಲಾ 1 ಕೋಟಿ ರೂ.ನೀಡಲಾಗಿದೆ ಎಂದು ತಿಳಿಸಿದೆ.
ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ಅಂದರೆ ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ, ಕಿಡ್ನಿ ವೈಫಲ್ಯ ಸೇರಿದಂತೆ ಇತರೆ ಖಾಯಿಲೆಗಳಿಂದ ಪ್ರತಿ ವರ್ಷ 100 ನೌಕರರು ಮರಣ ಹೊಂದುತ್ತಿದ್ದಾರೆ. ಈ ರೀತಿ ತಮ್ಮ ಸೇವಾವಧಿಯಲ್ಲಿ ಮರಣ ಹೊಂದುತ್ತಿರುವ ನೌಕರರ ಕುಟುಂಬದವರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ನಿಗಮದಿಂದ ಅವರಿಗೆ ನೆರವಾಗಲು ರೂ.3 ಲಕ್ಷ ನೀಡುತ್ತಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸದುದ್ದೇಶ ಸಂಸ್ಥೆಯದ್ದಾಗಿದೆ.
ವಿವಿಧ ಕಾರ್ಮಿಕ ಸಂಘಟನೆಗಳಿಂದಲೂ ಸಹ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರವನ್ನುರೂ.3 ಲಕ್ಷದಿಂದ ರೂ.10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಮೃತರ ಅವಲಂಬಿತರಿಗೆ ರೂ 7.00 ಲಕ್ಷಗಳ ಹೆಚ್ಚುವರಿ ಪರಿಹಾರ ಮೊತ್ತ ಲಭ್ಯವಾಗುತ್ತದೆ.
ಕಾರ್ಮಿಕರ ಜೀವ ಅಮೂಲ್ಯವಾದದ್ದು, ಜೀವಕ್ಕೆ ಯಾವುದೇ ರೀತಿಯಿಂದಲೂ ಬೆಲೆ ಕಟ್ಟಲಾಗುವುದಿಲ್ಲ. ಆದರೆ ನೌಕರರು ಮರಣ ಹೊಂದಿದ್ದಲ್ಲಿ, ಅವರ ಅವಲಂಬಿತರಿಗೆ ಆದಷ್ಟೂ ಆರ್ಥಿಕವಾಗಿ ಸಹಾಯ ಮಾಡುವುದು ನಿಗಮದ ಸದುದ್ದೇಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಸದರಿ ಯೋಜನೆಗೆ ನೌಕರರ ಮಾಸಿಕ ವಂತಿಕೆಯನ್ನು ಪ್ರಸ್ತುತ ರೂ. 100 ಗಳಿಂದ ರೂ. 200 ಗಳಿಗೆ ಹಾಗೂ ನಿಗಮದ ವತಿಯಿಂದ ಪ್ರತಿ ನೌಕರರ ಪರವಾಗಿ ನೀಡಲಾಗುತ್ತಿರುವ ರೂ. 50 ಗಳ ವಂತಿಕೆಯನ್ನು ರೂ. 100 ಗಳಿಗೆ ಹೆಚ್ಚಿಸಿ, ಪರಿಷ್ಕರಿಸಲಾಗಿದೆ.
ಪರಿಷ್ಕೃತ ಆದೇಶವು ನ. 1 ರಿಂದ ಜಾರಿಗೆ ಬರಲಿದ್ದು, ಈ ದಿನಾಂಕದ ನಂತರದಲ್ಲಿ ಉಂಟಾಗುವ ಮರಣ ಪ್ರಕರಣಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮೈಸೂರು -ಬೆಂಗಳೂರು ದರ ಹೆಚ್ಚಳ ಸಮರ್ಥನೆ
ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು – ಬೆಂಗಳೂರು ಬಸ್ ದರ ಏರಿಕೆ ಸಹಜ. ದಸರಾ ಹಬ್ಬದ ನಂತರ ನಿಗದಿತ ದರ ಇರಲಿದೆ ಎಂದು ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ.
ಕಳೆದ 4 ದಶಕಗಳಿಂದಲೂ ಪ್ರತಿ ವರ್ಷ ದಸರಾ ನಿಮಿತ್ತ 10 ದಿನಗಳ ಅಥವಾ ಸೀಮಿತ ಅವಧಿಗೆ ಅನ್ವಯವಾಗುವಂತೆ , ಮೈಸೂರು – ಬೆಂಗಳೂರು ನಡುವೆ ಕಾರ್ಯಾಚರಣೆಯಾಗುವ ದಸರಾ ವಿಶೇಷ ತಡೆರಹಿತ ಬಸ್ಸುಗಳಿಗೆ ನಿಯಮಾವಳಿಗಳನ್ವಯ ಶೇ.20 ಪ್ರಯಾಣ ದರ ಹೆಚ್ಚಿಸಿ ಕಾರ್ಯಾಚರಣೆ ಮಾಡಲಾಗುತ್ತದೆ. ಸದರಿ ಪ್ರಯಾಣ ದರವು ಸೀಮಿತ ಅವಧಿ ಮುಗಿದ ಕೂಡಲೇ ಸ್ಥಗಿತಗೊಳ್ಳುತ್ತದೆ. ಅದರಂತೆ ಪ್ರಸ್ತುತ ದರವು ಕೂಡ ಅ. 30ಕ್ಕೆ ಕೊನೆಗೊಳ್ಳಲಿದ್ದು, ಮೊದಲಿನ ದರದಲ್ಲಿಯೇ ಬಸ್ಸುಗಳು ಕಾರ್ಯಾಚರಣೆಯಾಗುತ್ತದೆ. ಎಂದು ಸಂಸ್ಥೆ ತಿಳಿಸಿದೆ.
ಕಾರಣ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಕರ ಒಂದು ಕಡೆ ಮಾತ್ರ ಜನ ಸಂದಣಿ ಇರುತ್ತದೆ. ಆದರೆ ಅದೇ ಬಸ್ಸುಗಳು ಮೈಸೂರಿನಿಂದ ವಾಪಸ್ಸು ಬರುವಾಗ ಪ್ರಯಾಣಿಕರಿಲ್ಲದೆ ಕಾರ್ಯಾಚರಣೆ ಮಾಡಬೇಕಾಗಿರುತ್ತದೆ. ಆದ್ದರಿಂದ ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಈ ಕ್ರಮವನ್ನು ಮೊದಲಿನಿಂದಲೂ ಅನುಸರಿಸಲಾಗುತ್ತಿದೆ.
ಮುಂದುವರೆದು, ಮೈಸೂರು – ಬೆಂಗಳೂರು ನಡುವೆ ಈ ಹಿಂದೆ ದರ ಹೆಚ್ಚಳವಾಗಿರುವುದಕ್ಕೆ ಕಾರಣ, ಮೈಸೂರು ಎಕ್ಸ್ಪ್ರೆಸ್ ವೇ ಎರಡು ಟೋಲ್ ಗಳ ದರದಲ್ಲಿ ಏಕಮಾರ್ಗದಲ್ಲಿಯೇ ಹಠಾತ್ತನೆ ರೂ.1090 ಹೆಚ್ಚಳವಾಗಿದ್ದರಿಂದ, ಪ್ರಯಾಣ ದರದಲ್ಲಿ ಟೋಲ್ ಹಣವನ್ನು ಸೇರ್ಪಡೆಗೊಳಿಸಿ ಹೆಚ್ಚಳ ಮಾಡಲಾಗಿತ್ತು. ಈ ದರವು ಎಕ್ಸ್ಪ್ರೆಸ್ ವೇ ಅಲ್ಲಿ ಕಾರ್ಯಾಚರಣೆಯಾಗುವ ತಡೆರಹಿತ ಬಸ್ಸುಗಳಿಗೆ ಮಾತ್ರ ಅನ್ವಯಿಸುತ್ತದೆ. ಎಕ್ಸ್ಪ್ರೆಸ್ ವೇ ಹೊರತುಪಡಿಸಿ ನೇರ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ವೇಗದೂತ ಸಾರಿಗೆಗಳಲ್ಲಿ ಈಗಲೂ ಹಳೆಯ ಪ್ರಯಾಣ ದರವೇ ಚಾಲ್ತಿಯಲ್ಲಿದೆ ಎಂದು ಸಂಸ್ಥೆ ಹೇಳಿದೆ.