ಸುದ್ದಿಮೂಲ ವಾರ್ತೆ
ರಾಯಚೂರು, ಮೇ 15: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳು ದೊರೆತಿರುವ ಕಾರಣ ಈ ಭಾಗದಲ್ಲಿ ಪ್ರತಿ ಜಿಲ್ಲೆಗೆ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ವ್ಯಾಪಕವಾಗಿ ಕೇಳಿಬಂದಿದೆ.
ಕಲ್ಯಾಣ ಕರ್ನಾಟಕ ಭಾಗದ 41 ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾಗಿದ್ದಾರೆ. ಇದರಲ್ಲಿ ಎಲ್ಲ ಸಮುದಾಯದ ನಾಯಕರು ಆಯ್ಕೆ ಆಗಿರುವುದರಿಂದ ಸಹಜವಾಗಿಯೇ ತಮ್ಮ ತಮ್ಮ ಸಮುದಾಯದವರಿಗೆ ಮತ್ತು ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
26 ಶಾಸಕರ ಪೈಕಿ ಅತಿ ಹೆಚ್ಚು 8 ಮಂದಿ ಶಾಸಕರು ಪರಿಶಿಷ್ಟ ಪಂಗಡ ವಾಲ್ಮೀಕಿ ಹಾಗೂ 8 ಮಂದಿ ಲಿಂಗಾಯತ ಸಮುದಾಯಕ್ಕೆ ಸೇರಿದವರು ಜಯಗಳಿಸಿದ್ದಾರೆ. ಸಹಜವಾಗಿಯೇ ಆಯಾ ಸಮುದಾಯದಿಂದ ಒಬ್ಬರು ಅಥವಾ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡ ಹೆಚ್ಚಿದೆ.
ಪರಿಶಿಷ್ಟ ಪಂಗಡದಿಂದ ಸುರಪುರದಿಂದ ಡಾ.ರಾಜಾ ವೆಂಕಟ್ಟಪ್ಪ ನಾಯಕ್, ರಾಯಚೂರು ಜಿಲ್ಲೆಯ ಮಾನ್ವಿಯಿಂದ ಹಂಪಯ್ಯ ನಾಯಕ್, ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಬಸನಗೌಡ ದದ್ದಲ, ಮಸ್ಕಿಯಿಂದ ಬಸನಗೌಡ ತುರ್ವಿಹಾಳ, ಬಳ್ಳಾರಿ ಗ್ರಾಮೀಣದಿಂದ ಬಿ. ನಾಗೇಂದ್ರ, ಸಂಡೂರಿನಿಂದ ಇ. ತುಕಾರಾಂ, ಕಂಪ್ಲಿಯಿಂದ ಜೆ.ಎನ್. ಗಣೇಶ್, ಸಿರಗುಪ್ಪದಿಂದ ನಾಗರಾಜ್ ಆಯ್ಕೆಯಾಗಿದ್ದಾರೆ.
ಇದರಲ್ಲಿ ಅತಿ ಹೆಚ್ಚು ನಾಲ್ಕು ಬಾರಿ ಸುರಪುರದ ರಾಜಾ ವೆಂಕಟಪ್ಪ ನಾಯಕ್, ಸಂಡೂರಿನ ಇ.ತುಕಾರಾಂ ಮತ್ತು ಬಳ್ಳಾರಿ ಗ್ರಾಮೀಣದಿಂದ ಬಿ. ನಾಗೇಂದ್ರ ಆಯ್ಕೆಯಾಗಿದ್ದರೆ, ಎರಡನೇ ಸ್ಥಾನದಲ್ಲಿ ಮಾನ್ವಿಯ ಹಂಪಯ್ಯ ನಾಯಕ್ ಮೂರು ಬಾರಿ ಮತ್ತು ಬಸನಗೌಡ ದದ್ದಲ್ ಹಾಗೂ ಬಸನಗೌಡ ತುರ್ವಿಹಾಳ ಎರಡನೇ ಬಾರಿ ಶಾಸಕರಾಗಿದ್ದಾರೆ. ಆದರೆ, ಇ.ತುಕಾರಾಂ ಮಾತ್ರ ಕಾಂಗ್ರೆಸ್ ಪಕ್ಷದಿಂದಲೇ ನಾಲ್ಕು ಬಾರಿ ಶಾಸಕರಾಗಿದ್ದಲ್ಲೆ ಒಮ್ಮೆ ಸಚಿವರೂ ಆಗಿದ್ದರು. ಹೀಗಾಗಿ ಎಂಟು ಜನ ವಾಲ್ಮೀಕಿ ಸಮುದಾಯದ ಶಾಸಕರಲ್ಲಿ ಹಿರಿತನ ಮತ್ತು ಪಕ್ಷ ನಿಷ್ಠೆಯ ಮೇಲೆ ಸಚಿವ ಸ್ಥಾನ ನೀಡಲಾಗುತ್ತದೋ ಅಥವಾ ಜಿಲ್ಲಾವಾರು ಪ್ರಾತಿನಿಧ್ಯ ನೀಡಲಾಗುತ್ತದೋ ಎಂಬುದು ಕುತೂಹಲ ಮೂಡಿಸಿದೆ.
ಅದೇ ರೀತಿ ಲಿಂಗಾಯತ ಸಮುದಾಯದವರು ಯಲಬುರ್ಗಾದಿಂದ ಬಸವರಾಜ ರಾಯರೆಡ್ಡಿ, ಸಿಂಧನೂರಿನಿಂದ ಹಂಪನಗೌಡ ಬಾದರ್ಲಿ, ಶಹಪುರದಿಂದ ಶರಣಬಸಪ್ಪ ದರ್ಶನಾಪುರ, ಭಾಲ್ಕಿಯಿಂದ ಈಶ್ವರ ಖಂಡ್ರೆ, ಸೇಡಂನಿಂದ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಗುಲ್ಬರ್ಗಾ ದಕ್ಷಿಣದಿಂದ ಅಲ್ಲಮಪ್ರಭು ಪಾಟೀಲ, ಆಳಂದದಿಂದ ಬಿ.ಆರ್. ಪಾಟೀಲ್, ಅಫ್ಜಲಪುರದಿಂದ ಎಂ.ವೈ. ಪಾಟೀಲ್ ಆಯ್ಕೆಯಾಗಿದ್ದಾರೆ. ಇದರಲ್ಲಿ ಅತಿ ಹೆಚ್ಚು ಬಾರಿ ಕಾಂಗ್ರೆಸ್ನಿಂದಲೇ ಡಾ.ಶರಣಪ್ರಕಾಶ್ ಪಾಟೀಲ್ ಜಯಗಳಿಸಿದ್ದರೆ, ರಾಯರೆಡ್ಡಿ ಆರನೇ ಬಾರಿ, ಹಂಪನಗೌಡ ಬಾದರ್ಲಿ ಐದನೇ ಬಾರಿ, ಶರಣಬಸಪ್ಪ ದರ್ಶನಾಪುರ ನಾಲ್ಕನೇ ಬಾರಿ ಜಯಗಳಿಸಿದ ಹಿರಿತನದಲ್ಲಿ ಮುಂದಿದ್ದಾರೆ.
ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಶಾಸಕರು ಜಯಗಳಿಸಿರುವ ಲಿಂಗಾಯತ ಮತ್ತು ಪರಿಶಿಷ್ಟ ಪಂಗಡದ ನಡುವೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಸಹ ಕುತೂಹಲದ ಸಂಗತಿಯಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ ಮೀಸಲು ಕ್ಷೇತ್ರಗಳಿಂದ ಕಾಂಗ್ರೆಸ್ ಪಕ್ಷದಿಂದ ಪ್ರಿಯಾಂಕ್ ಖರ್ಗೆ ಮತ್ತು ಕನಕಗಿರಿಯಿಂದ ಶಿವರಾಜ ತಂಗಡಗಿ ಆಯ್ಕೆಯಾಗಿದ್ದಾರೆ. ಇಬ್ಬರಲ್ಲಿ ಒಬ್ಬರು ಪರಿಶಿಷ್ಟ ಬಲಗೈ ಮತ್ತೊಬ್ಬರು ಬೋವಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಬ್ಬರು ಸಹ ಮೂರು ಬಾರಿ ಆಯ್ಕೆ ಆಗಿರುವುದರಿಂದ ಜಿಲ್ಲಾ ಹಾಗೂ ಜಾತಿವಾರು ಪ್ರಾತಿನಿಧ್ಯ ನೀಡಿದಲ್ಲಿ ಇಬ್ಬರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಉಳಿದಂತೆ ಹಿಂದುಳಿದ ವರ್ಗಕ್ಕೆ ಸೇರಿದವರ ಪೈಕಿ ಕೊಪ್ಪಳದಿಂದ ರಾಘವೇಂದ್ರ ಹಿಟ್ನಾಳ ಮತ್ತು ಜೇವರ್ಗಿಯಿಂದ ಡಾ. ಅಜಯ್ಸಿಂಗ್ ತಲಾ ಮೂರು ಬಾರಿ ಜಯಗಳಿಸಿದ್ದರೆ, ವಿಜಯನಗರ ಕ್ಷೇತ್ರದಿಂದ ಎಚ್.ಆರ್. ಗವಿಯಪ್ಪ ಆಯ್ಕೆಯಾಗಿದ್ದಾರೆ. ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಮೂವರು ಶಾಸಕರಾಗಿ ಆಯ್ಕೆ ಆಗಿರುವುದರಿಂದ ಯಾರಿಗೆ ಸಚಿವ ಸ್ಥಾನ ಒಲಿಯುತ್ತದೆ ಎಂದು ಕಾದುನೋಡಬೇಕು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದಲ್ಲಿ ಕುರುಬ ಸಮಾಜದ ಇತರೆ ಶಾಸಕರಿಗೆ ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬುದು ಸಹ ಚರ್ಚೆಗೆ ಗ್ರಾಸವಾಗಿದೆ. ಕೊಪ್ಪಳದಿಂದ ರಾಯರಡ್ಡಿ ಮತ್ತು ತಂಗಡಗಿ ಕೊಪ್ಪಳ ಜಿಲ್ಲೆಯಿಂದ ಸಚಿವರಾಗಿರುವುದರಿಂದ ಇಲ್ಲಿ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ ಎಂಬುದು ಸಹ ಕಾದು ನೋಡಬೇಕಾಗಿದೆ.
ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೇವಲ ಇಬ್ಬರು ಮಾತ್ರ ಜಯಗಳಿಸಿದ್ದಾರೆ. ಬೀದರ್ನಿಂದ ರಹೀಂ ಖಾನ್ ಮತ್ತು ಕಲಬುರ್ಗಿ ಉತ್ತರದಿಂದ ಕನೀಜ್ ಫಾತಿಮಾ ಜಯಗಳಿಸಿದ್ದಾರೆ. ರಹೀಂ ಖಾನ್ ಮೂರನೇ ಬಾರಿ ಶಾಸಕರಾಗಿದ್ದರೆ, ಕನೀಜ್ ಫಾತಿಮಾ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಸ್ಲಿಮರಿಗೆ ಮತ್ತು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಲೆಕ್ಕಾಚಾರಗಳು ಬಂದಲ್ಲಿ ಈ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಿಂದ ಸಚಿವರು ಆಗಲು ಪೈಪೋಟಿ ನಡೆದಿದೆ. ಅತಿಹೆಚ್ಚು ಬಾರಿ ಗೆದ್ದವರಲ್ಲಿ ರಾಯರಡ್ಡಿ, ಹಂಪನಗೌಡ ಬಾದರ್ಲಿ, ಡಾ.ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ, ಬಿ.ಆರ್. ಪಾಟೀಲ್ ಮುಂಚೂಣಿಯಲ್ಲಿರುವ ಲಿಂಗಾಯತ ಶಾಸಕರು. ಎಸ್ಟಿ ಪೈಕಿ ರಾಜಾ ವೆಂಕಟಪ್ಪ ನಾಯಕ, ಬಿ. ನಾಗೇಂದ್ರ, ಇ ತುಕಾರಾಂ, ಹಂಪಯ್ಯ ನಾಯಕ್ ಮುಂಚೂಣಿಯಲ್ಲಿರುವ ಪರಿಶಿಷ್ಟ ಪಂಗಡದವರಾಗಿದ್ದಾರೆ.
ಹಿಂದುಳಿದವರ ಪೈಕಿ ಡಾ. ಅಜಯ್ಸಿಂಗ್, ರಾಘವೇಂದ್ರ ಹಿಟ್ನಾಳ್ ತಲಾ ಮೂರು ಬಾರಿ ಜಯಗಳಿಸಿದ್ದು, ಮೊದಲ ಸ್ಥಾನದಲ್ಲಿದ್ದರೆ, ಗವಿಯಪ್ಪ ಸಹ ಎರಡು ಬಾರಿ ಜಯಗಳಿಸುವ ಮೂಲಕ ನಂತರದ ಸ್ಥಾನದಲ್ಲಿರುವ ಹಿಂದುಳಿದ ವರ್ಗದ ಪ್ರಮುಖರು.
ಪರಿಶಿಷ್ಟ ಜಾತಿಗೆ ಸೇರಿದವರ ಪೈಕಿ ಪ್ರಿಯಾಂಕ್ ಖರ್ಗೆ ಮತ್ತು ಶಿವರಾಜ್ ತಂಗಡಗಿ ತಲಾ ಮೂರು ಬಾರಿ ಜಯಗಳಿಸಿದ್ದು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ರಹೀಂ ಖಾನ್ ಮತ್ತು ಕನೀಜ್ ಫಾತಿಮಾ ಅನುಕ್ರಮವಾಗಿ ನಾಲ್ಕು ಮತ್ತು ಎರಡನೇ ಬಾರಿ ಜಯಗಳಿಸಿದ್ದು, ಈ ಎಲ್ಲಾ ರಾಜಕೀಯ ಹಿನ್ನೆಲೆಯಲ್ಲಿ ಜಾತಿವಾರು-ಜಿಲ್ಲಾವಾರು ಅಳೆದು ತೂಗಿ ಪ್ರಾತಿನಿಧ್ಯ ನೀಡಬೇಕಿರುವುದರಿಂದ ಅದೃಷ್ಟ ಯಾರಿಗಿದೆ ಎಂಬುದು ಕಾದು ನೋಡಬೇಕು.
ಈ ಮಧ್ಯೆ ಗುರಮಿಠಕಲ್ ಕ್ಷೇತ್ರದಿಂದ ಪರಾಭವಗೊಂಡಿರುವ ಗಂಗಾಮತ ಸಮುದಾಯದ ಬಾಬುರಾವ್ ಚಿಂಚನಸೂರ ಪರಾಭವಗೊಂಡಿದ್ದಾರೆ. ಆದರೆ, ಬಿಜೆಪಿಯಿಂದ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಗಾಮತಸ್ಥರಿಗೆ ಪ್ರಾತಿನಿಧ್ಯ ನೀಡಬೇಕಾಗಿರುವುದರಿಂದ ಇವರಿಗೆ ವಿಧಾನ ಪರಿಷತ್ತಿಗೆ ನಾಮಕರಣ ಮಾಡಿ ಸಚಿವರನ್ನಾಗಿ ಮಾಡುವ ಉದ್ದೇಶ ಎಐಸಿಸಿ ವರಿಷ್ಠರಲ್ಲಿ ಇದೆ ಎನ್ನಲಾಗಿದೆ. ಈ ಎಲ್ಲದಕ್ಕೂ ಇನ್ನೆರಡು ದಿನ ಕಾಯಬೇಕಾಗಿದೆ.