ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಆ.28: ಭಾವೈಕ್ಯತೆಯಿಂದ ಭಾರತದಲ್ಲಿ ನೆಲೆಸಲು ಯುವಕರಲ್ಲಿ ಅಂಬೇಡ್ಕರ್ರವರ ಜೀವನ, ಬದುಕಿನ ಬಗ್ಗೆ ಅರಿವು ಮೂಡಿಸುವ ಅಗತ್ಯವಿದ್ದು, ಪ್ರಜಾಪ್ರಭುತ್ವ ಮೌಲ್ಯವನ್ನು ಜಾಗೃತಗೊಳ್ಳಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಿದ್ದೇವೆ ಎಂದು ದಲಿತ ವಿದ್ಯಾರ್ಥಿ ಪರಿಷತ್ನ ಸಂಪನ್ಮೂಲ ವ್ಯಕ್ತಿ ಮ್ಯಾಥ್ಯೂ ಮುನಿಯಪ್ಪ ತಿಳಿಸಿದರು.
ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ರವರ ಬದುಕು, ಬರಹಗಳ ಕುರಿತ ಪರೀಕ್ಷೆಗೆ ಚಾಲನೆ ನೀಡಿದ ಅವರು, ಬಾಬಾ ಸಾಹೇಬರ ಗುರಿಯನ್ನು ಸಾಕಾರ ಮಾಡಬೇಕಿರುವ ವಾತಾವರಣದಲ್ಲಿ ನಾವಿದ್ದು, ಸ್ವಾಸ್ಥ್ಯ ಸಮಾಜದ ನಿರ್ಮಾಣದೊಂದಿಗೆ ಜಾಗೃತ ಭಾರತವನ್ನು ಕಟ್ಟುವಲ್ಲಿ ಎಲ್ಲರೂ ಜತೆಯಾಗಬೇಕಿದೆ. ಅವರ ಜೀವನದಲ್ಲಿ ಅನುಭವಿಸಿದ ಶೋಷಣೆ, ಅನ್ಯಾಯಗಳನ್ನು ಶಿಕ್ಷಣದಿಂದ ಮೆಟ್ಟಿ ನಿಂತು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಧೀಮಂತ ನಾಯಕರ ಕುರಿತು ವಿದ್ಯಾರ್ಥಿಗಳನ್ನು ಅಧ್ಯಯನಶೀಲರನ್ನಾಗಿಸಲು ಇದೊಂದು ನವೀನ ಪ್ರಯತ್ನವಾಗಿದೆ ಎಂದರು.
ಹಿರಿಯ ದಲಿತಪರ ಹೋರಾಟಗಾರ ವೆಂಕಟೇಶಪ್ಪ ಮಾತನಾಡಿ, ಹೊಸ ತಲೆಮಾರಿಗೆ ಹೋರಾಟದ ಕಿಚ್ಚು ಕಡಿಮೆಯಾಗಿದೆ. ಅನ್ಯಾಯವನ್ನು ಧಿಕ್ಕರಿಸುವ ಆತ್ಮಸ್ಥೈರ್ಯ ಕುಗ್ಗಿದೆ. ಅಂಬೇಡ್ಕರ್ರನ್ನು ಓದಿಕೊಂಡರೆ ಯಾವುದೇ ವ್ಯಕ್ತಿಯಲ್ಲಾದರೂ ಸ್ವಾಭಿಮಾನದೊಂದಿಗೆ ಸಮಾಜ ಜನತೆಯ ಭಾವ ಮೂಡುತ್ತದೆ. ತಾರತಮ್ಯರಹಿತ ಸಮಾಜದ ಉಗಮಕ್ಕೆ ಯುವ ಪಡೆಯೂ ಬಾಬಾ ಸಾಹೇಬರ ಬರಹಗಳನ್ನು ಅಪ್ಪಿಕೊಂಡು, ಧೀರ್ಘವಾಗಿ ಚಿಂತಿಸಬೇಕಿದೆ ಎಂದರು.
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ರವಿ ಮಾತನಾಡಿ, ರಾಜ್ಯಾದ್ಯಂತ ಅಂಬೇಡ್ಕರ್ ಕುರಿತು ಪರೀಕ್ಷೆಗಳು ನಡೆಯುತ್ತಿದ್ದು, ವಿಜೇತ ಅಭ್ಯರ್ಥಿಗಳಿಗೆ 5 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಜಿಲ್ಲಾವಾರು 1 ಲಕ್ಷ ನಗದು ಬಹುಮಾನ ಸಿಗಲಿದ್ದು, ಅಂಬೇಡ್ಕರ್ ಕುರಿತು ವಿದ್ಯಾರ್ಥಿ ದೆಸೆಯಲ್ಲಿಯೇ ಓದುವಂತೆ ಪ್ರೇರೆಪಿಸಲು ಕಳೆದ 2 ವರ್ಷಗಳಿಂದ ನಮ್ಮ ಸಂಘಟನೆ ಪರೀಕ್ಷೆ ಆಯೋಜಿಸುತ್ತಿದೆ ಎಂದರು.
ಇದೇ ವೇಳೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜು, ನೆಲಮಂಗಲದ ಸಿದ್ದಗಂಗಮ್ಮ, ಅಜಯ್, ಸಂಜಯ್, ಭರತ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.