ಸುದ್ದಿಮೂಲ ವಾರ್ತೆ
ಕುಷ್ಟಗಿ,ಜು.27:ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ಸರಿಯಾಗಿ ಅಕ್ಕಿ ಹಂಚಿಕೆ ಮಾಡುತ್ತಿಲ್ಲ ಎಂದು ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮತ(ವಿ.ಎಸ್.ಎಸ್.ಎನ್) ಸೊಸೈಟಿಯ ನ್ಯಾಯಬೆಲೆ ಅಂಗಡಿಯ ಮಾಲೀಕರ ವಿರುದ್ಧ ಕಲಾಲಬಂಡಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಮುಕ್ತುಂಸಾಬ ಗುಡಿಹೊಲ ಅವರ ನೇತೃತ್ವದಲ್ಲಿ ಗ್ರಾಮಸ್ಥರು, ತಹಸೀಲ್ದಾರ್ ಕಚೇರಿಗೆ ದೂರು ಸಲ್ಲಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನವಿ ಸಲ್ಲಿಸುವ ಮುನ್ನ ಗ್ರಾಹಕರು, ಗ್ರಾಮದ ವಿ.ಎಸ್.ಎಸ್.ಎನ್) ಸೊಸೈಟಿಯ ನ್ಯಾಯಬೆಲೆ ಅಂಗಡಿಯ ಮಾಲೀಕರ ವಿರುದ್ಧ ಪಡಿತರ ಚೀಟಿ ಪ್ರದರ್ಶಿಸಿ ಘೋಷಣೆ ಕೂಗಿದರು.
ಬೆನಕನಾಳ ವಿ.ಎಸ್.ಎಸ್.ಎನ್ ಸೊಸೈಟಿಯವರು ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿ ಮತ್ತು ಜೋಳವನ್ನು ಗ್ರಾಮದ ಪಡಿತರದಾರರಿಗೆ ಸರಿಯಾಗಿ ವಿತರಿಸದೆ ಅನ್ಯಾಯ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಸಮಾರು 50 ರಿಂದ 100 ಜನರಿಗೆ ಆನ್ಲೈನ್ ಮೂಲಕ ಖರ್ಚು ತೋರಿಸಿ ತಮ್ಮ ಬಳಿ ಅಕ್ಕಿ ಮತ್ತು ಜೋಳ ಖಾಲಿಯಾಗಿದೆ ಎಂದು ರಶೀದಿಯನ್ನು ನೀಡಿ ಮುಂದಿನ ತಿಂಗಳು ಹಂಚಿಕೆ ಮಾಡುವುದಾಗಿ ಹೋಗುತ್ತಿದ್ದಾರೆ. ಹೀಗಾಗಿ ಪಡಿತರ ವಿತರಿಸುವ ಸ್ಥಳವಾದ ಗ್ರಾಮದ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಳೆದ ಐದಾರು ತಿಂಗಳಿನಿಂದ ಪಡಿತರದಾರರಿಗೆ ಮೋಸ ಮಾಡುತ್ತಿರುವ ಬೆನಕನಾಳ ಗ್ರಾಮದ ವಿ.ಎಸ್.ಎಸ್.ಎನ್. ಸೊಸೈಟಿಯವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.