ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.5: ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಪ್ರಾಧ್ಯಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಪಕರು ನೇರ ನೇಮಕಾತಿಯಲ್ಲಿ ಪ್ರಭಾವಿಗಳ ಮಕ್ಕಳನ್ನೇ ಆಯ್ಕೆ ಮಾಡಿದ್ದು, ಈ ಸಂಬಂಧ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ.ಹೆಚ್.ವಿ.ಮನೋಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ನಗರದಲ್ಲಿಂದು ಬಹುಮಹಡಿ ಕಟ್ಟಡದ ಬಳಿಯಿರುವ ಲೋಕಾಯುಕ್ತ ಕೇಂದ್ರ ಕಚೇರಿಗೆ ಜನತಾ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ನೇತೃತ್ವದ ನಿಯೋಗವು ದೂರು ಸಲ್ಲಿಕೆ ಮಾಡಿದ್ದು, 2022-23ನೇ ಸಾಲಿನಲ್ಲಿ ಪ್ರಾಧ್ಯಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಪಕರು ನಡೆದಿರುವ ನೇರ ನೇಮಕಾತಿಯನ್ನೇ ರದ್ದುಗೊಳಿಸಿ, ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು, ಪ್ರಭಾವಿಗಳು, ಹಾಗೂ ಲಂಚಕೊಟ್ಟಿರುವವರನ್ನು ಆಯ್ಕೆ ಮಾಡಿರುವ ದೂರುಗಳಿವೆ. ಈ ಸಂಬಂಧ ದಾಖಲೆ ಸಮೇತ ಲೋಕಾಯುಕ್ತಕ್ಕೆ ಸಲ್ಲಿಸಲಾಗಿದೆ ಎಂದರು.
ಒಟ್ಟು 58 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಿ, ತಮ್ಮ ಆಯ್ಕೆಯಂತೆ ನೇಮಕ ಮಾಡಲಾಗಿದೆ. ಅದರಲ್ಲಿಇದುವರೆಗೂ 10 ಮಂದಿಗೆ ನೇಮಕ ಆದೇಶ ಕೈಗೆ ಸೇರದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ಗಂಭೀರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.