ಸುದ್ದಿಮೂಲ ವಾರ್ತೆ
ಆನೇಕಲ್, ಜು 13 : ಕಳೆದ ಮೂರು ದಿನಗಳಿಂದ ತಮಿಳುನಾಡಿನ ಗಡಿಭಾಗದಲ್ಲಿ ಪುಂಡಾನೆ ಹಾವಳಿ ಮಿತಿ ಮೀರಿವೆ. ಐದು ಕಾಡಾನೆಗಳ ಹಿಂಡು ಗಡಿಭಾಗದ ಸೋಲೂರು ವಣಕನಳ್ಳಿಯಲ್ಲಿ ಬಿಡುಬಿಟ್ಟಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೋಲೂರು ವಣಕನಹಳ್ಳಿ ಭಾಗದಲ್ಲಿ ಗುರುವಾರ ಬೆಳ್ಳಂ ಬೆಳಗ್ಗೆ ಕಾಡಾನೆಗಳ ಹಿಂಡು ಪ್ರತ್ಯಕ್ಷ ಆದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆ ಮಾಡಿದೆ.
ಅದರಲ್ಲೂ ಕಾಡಂಚಲ್ಲಿರುವ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದೆ. ರೈತರು ಬೆಳೆದಿರುವ ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. . ರಾಗಿ, ಬಾಳೆ, ಟೊಮೆಟೊ , ತೆಂಗು ಹಸಿ ಭತ್ತ ಬೆಳೆಗಳನ್ನ ತಿಂದು ನಾಶ ಮಾಡುತ್ತಿವೆ. ಊರಿನ ಗ್ರಾಮಸ್ಥರು ಹೊರಗಡೆ ಓಡಾಡಲು ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನ ಗ್ರಾಮಗಳತ್ತ ಬಾರದಂತೆ ಎಷ್ಟೆಲ್ಲಾ ಮುಂಜಾಗ್ರತೆಗಳನ್ನ ತೆಗೆದುಕೊಂಡರೂ ರಾತ್ರಿ ಸಮಯದಲ್ಲಿ ಕಾಡಾನೆಗಳು ಗ್ರಾಮಗಳತ್ತ ಧಾವಿಸಿ ಜನರಿಗೆ ತೊಂದರೆ ಕೊಡುತ್ತಿದೆ. ಇನ್ನು ಕಾಡಾನೆಗಳನ್ನು ಕಾಡಿಗೆ ಕಟ್ಟಲು ಅರಣ್ಯ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿದ್ದಾರೆ.