ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.1: ಬಿಜೆಪಿ ಜತೆ ಮೈತ್ರಿಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಹಿತ ಹಲವು ಶಾಸಕರು, ಪಕ್ಷದ ಮುಖಂಡರ ಅಸಮಧಾನ ವ್ಯಕ್ತಪಡಿಸಿದ ಬಳಿಕ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ಸಭೆ ನಡೆಸಿ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದರು.
ಬಿಜೆಪಿ ಮೈತ್ರಿ ವಿಚಾರದಲ್ಲಿ ಯಾರನ್ನು ಕತ್ತಲೆಯಲ್ಲಿ ಇಟ್ಟಿಲ್ಲ, ಇಡುವ ಅಗತ್ಯವೂ ಇಲ್ಲ ಎಂದು ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಬಿಡದಿಯ ಕೇತಿಗಾನಹಳ್ಳಿಯ ತೋಟದಲ್ಲಿಪಕ್ಷದ ಅನೇಕ ಆಹ್ವಾನಿತ ಮುಖಂಡರ ಸಭೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂದಿನ ಸಭೆಗೆ ಅವರನ್ನು ಆಹ್ವಾನಿಸಲಾಗಿತ್ತಾದರೂ ಸಹ ಅವರು, ನಾನು ಸಭೆಗೆ ಬರುವುದಿಲ್ಲ. ದೇವೇಗೌಡರ ಬಗ್ಗೆ ನನಗೆ ಗೌರವ ಇದೆ. ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಇನ್ನೂ ತಮ್ಮ ಅಸಮಾಧಾನ ಮುಂದುವರಿಸಿದ್ದಾರೆ.
ದೂರದೃಷ್ಟಿಯ ನಿರ್ಧಾರ:
ಅಲ್ಲದೆ, ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವ ಬಂಡೆಪ್ಪ ಕಾಷೆಂಪೋರ, ಶಾಸಕರಾದ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕರಾದ ಗುರು ಪಾಟೀಲ್, ರಾಜಾ ವೆಂಕಟಪ್ಪ ನಾಯಕ ಮುಂತಾದವರು; ಪಕ್ಷ ಮತ್ತು ವರಿಷ್ಠರು ಕೈಗೊಂಡ ನಿರ್ಧಾರ ದೂರದೃಷ್ಟಿಯಿಂದ ಕೂಡಿದೆ. ಪಕ್ಷದ ಹಿತ ಅದರಲ್ಲಿ ಅಡಗಿದೆ. ನಾವೆಲ್ಲರೂ ಈ ನಿರ್ಧಾರಕ್ಕೆ ಬದ್ಧವಾಗಿದ್ದೇವೆ. ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರಕ್ಕೆ ಸೊಪ್ಪು ಹಾಕುವುದಿಲ್ಲ ಎಂದು ಹೇಳಿದರು.
ಪಕ್ಷದ ಹಿತಕ್ಕಾಗಿ ವರಿಷ್ಠರು ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತ್ತೇವೆ. ಪಕ್ಷ ಉಳಿದರೆ ನಾವು ಉಳಿಯುತ್ತವೆ. ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ ಆಗಿದೆ ಎಂದು ಅವರೆಲ್ಲರೂ ಹೇಳಿದರು.
ಅಲ್ಲದೆ ತಮ್ಮ ಭಾಷಣದ ನಡುವೆ ಜಿ.ಟಿ. ದೇವೇಗೌಡ ಅವರು ಮುಖಂಡರಿಂದ ಪಕ್ಷ ನಿಷ್ಠೆ ಬಗ್ಗೆ ಪ್ರಮಾಣ ಮಾಡಿಸಿದರು.
ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ:
ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು ಮಾತನಾಡಿ, ಅಲ್ಪಸಂಖ್ಯಾತರಾದ ನಾವು ನಮ್ಮ ಆಚಾರ ವಿಚಾರ, ಆಹಾರ ಪದ್ಧತಿ ಇತ್ಯಾದಿಗಳಿಂದ ಕೆಲವು ಸಮಸ್ಯೆ ಎದುರಿಸುತ್ತಿದ್ದೇವೆ. ಆ ವಿಷಯದಲ್ಲಿ ಪಕ್ಷ ನಮ್ಮ ಜತೆ ನಿಂತಿದೆ ಎಂದರು.
ಯಾರೇ ಪಕ್ಷ ಬಿಟ್ಟರೂ ನಾನು ಪಕ್ಷ ಬಿಡಲ್ಲ. ಇಪ್ಪತ್ತು ತಿಂಗಳ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರದ ಕಾಲದಲ್ಲಿ ಅಲ್ಪಸಂಖ್ಯಾತರಿಗೆ ಏನಾದರೂ ತೊಂದರೆ ಆಯಿತಾ? ಕುಮಾರಸ್ವಾಮಿ ಅವರು ಅನೇಕ ಸೌಲಭ್ಯಗಳನ್ನು ಮಾಡಿಕೊಟ್ಟರು. ಎಲ್ಲೂ ಕೂಡ ನಮಗೆ ಜೆಡಿಎಸ್ ಅಥವಾ ಕುಮಾರಸ್ವಾಮಿ ಅವರಿಂದ ಅನ್ಯಾಯ ಆಗಿಲ್ಲ. ನಮ್ಮ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭರವಸೆ ನೀಡಿದ್ದಾರೆ ಇಂದು ಬಿ.ಎಂ.ಫಾರೂಕ್ ಅವರು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಮುಸ್ಲಿಮರ ನಡುವಿನ ಬಾಂಧವ್ಯ ಬಹಳ ಚೆನ್ನಾಗಿದೆ. ಅದನ್ನು ಕೆಡಿಸುವ ಶಕ್ತಿಗಳ ಬಗ್ಗೆ ಮುಸ್ಲೀಮರು ಆಲೋಚನೆ ಮಾಡುವುದು ಬೇಡ. ಮುಸ್ಲೀಮರಿಗೆ ಪಕ್ಷ ಸಾಕಷ್ಟು ನೀಡಿದೆ ಎಂದರು.
ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಇಮ್ತಿಯಾಜ್ ರಫೀಕ್ ಅವರು ಮಾತನಾಡಿ, ಪಕ್ಷಕ್ಕೆ ನಾವು ನಿಷ್ಠರಾಗಿದೇವೆ. ಅಲ್ಪಸಂಖ್ಯಾತರು ಯಾರು ಪಕ್ಷ ಬಿಟ್ಟು ಹೋಗಿಲ್ಲ, ಪಕ್ಷ ಮತ್ತು ವರಿಷ್ಠರು ಕೈಗೊಂಡ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ. ಅನಗತ್ಯವಾಗಿ ಪಕ್ಷದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಕಾಂಗ್ರೆಸ್ ಸುಮ್ಮನೆ ಮುಸ್ಲಿಮರನ್ನು ಒಡೆದು ಆಳುವ ಬದಲು ಮುಸ್ಲೀಮರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಿ ಎಂದು ಒತ್ತಾಯ ಮಾಡಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯ ನಾಯಕ್, ಮಾಜಿ ಸಚಿವ ಹೆಚ್.ರೇವಣ್ಣ, ವೆಂಕಟರಾವ್ ನಾಡಗೌಡ, ಅಲ್ಕೋಡ್ ಹನುಮಂತಪ್ಪ, ಬಿ.ಎಂ.ಫಾರೂಕ್, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಶಾಸಕರಾದ ಕರೆಮ್ಮ ನಾಯಕ್, ನೇಮಿರಾಜ್ ನಾಯಕ್, ಎ.ಮಂಜು, ಸಮೃದ್ಧಿ ಮಂಜುನಾಥ್, ಜಿ.ಟಿ.ಹರೀಶ್ ಗೌಡ, ವೆಂಕಟ ಶಿವಾರೆಡ್ಡಿ, ಹೆಚ್.ಸಿ.ಬಾಲಕೃಷ್ಣ, ಟಿ.ಎ.ಶರವಣ, ಸೂರಜ್ ರೇವಣ್ಣ, ಸ್ವರೂಪ್ ಪ್ರಕಾಶ್, ರಾಜೂಗೌಡ ಪಾಟೀಲ, ಮೇಲೂರು ರವಿ, ಎಂ.ಟಿ.ಕೃಷ್ಣಪ್ಪ, ಕೆ ಆರ್ ಪೇಟೆ ಮಂಜುನಾಥ್ ಸೇರಿದಂತೆ ಎಲ್ಲಾ ಶಾಸಕರು ಮತ್ತು ಎಲ್ಲ ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.
ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು,ಲೀಲಾದೇವಿ ಆರ್ ಪ್ರಸಾದ್, ಪಕ್ಷದ ಹಿರಿಯ ನಾಯಕ ಬಿ.ಸಿ.ಗೌರಿಶಂಕರ್, ಜೆಡಿಎಸ್ ರಾಜ್ಯ ಯುವಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಸುರೇಶ್ ಬಾಬು, ಮಾಜಿ ಉಪ ಸ್ಪೀಕರ್ ಕೆ.ಎಂ.ಕೃಷ್ಣಾರೆಡ್ಡಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.