ಸುದ್ದಿಮೂಲ ವಾರ್ತೆ
ಮೈಸೂರು, ಜು.18 : “ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯ್ತಿ”… ಎಂಬಂತಾಗಿದೆ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ 120 ಕಾಲೇಜುಗಳಲ್ಲಿ ಅಧ್ಯಯನ ಮಾಡುವ 1.20 ಲಕ್ಷ ವಿದ್ಯಾರ್ಥಿಗಳ ಸ್ಥಿತಿ. ಏಕೆಂದರೆ, ಈ ವಿವಿಯ ಹಾಲಿ ಉಪಕುಲಪತಿಗಳ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಿಂಗಳಾದರೂ ಇನ್ನೂ ಇತ್ಯರ್ಥ ಆಗಿಲ್ಲ. ಇದರಿಂದ ವಿಶ್ವವಿದ್ಯಾಲಯದ 144 ನೇ ಘಟಿಕೋತ್ಸವ ನಡೆಯದೇ ನೆನೆಗುದಿಗೆ ಬಿದ್ದಿದೆ.
ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಗುತ್ತಿಲ್ಲ ಮಾರ್ಚ್ ಅಥವಾ ಏಪ್ರಿಲ್ ಮೊದಲ ವಾರಕ್ಕೆ ನಡೆಯಬೇಕಿತ್ತು. ಇನ್ನೂ ನಡೆಸುವುದಿರಲಿ, ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲು ಆಗುತ್ತಿಲ್ಲ. ಬೇರೆ ವಿವಿಗಳ ಘಟಿಕೋತ್ಸವ ಮುಗಿದು ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರವನ್ನು ಪಡೆದು ಮುಂದಿನ ವ್ಯಾಸಂಗ ಅಥವಾ ಉದ್ಯೋಗ ಪಡೆಯುವಲ್ಲಿ ನಿರತರಾಗಿದ್ದಾರೆ.
ಆದರೆ ದುರದೃಷವಶಾತ್ ಶತಮಾನಗಳ ಇತಿಹಾಸ ಹೊಂದಿರುವ ಮೈಸೂರು ವಿವಿ ಘಟಿಕೋತ್ಸವ ನಡೆಯದೆ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮಾಡಲು ಉದ್ಯೋಗ ಪಡೆದು ತಮ್ಮ ಬದುಕನ್ನು ಕಟ್ಟಿಕೊಳ್ಳಲು ತೀವ್ರತರನಾದ ಅಡಚಣೆಯಾಗಿದೆ.
ಮೈಸೂರು ವಿವಿ ಕುಲಪತಿ ಪ್ರೊ ಎನ್.ಕೆ. ಲೋಕನಾಥ್ ರ ನೇಮಕಕ್ಕೆ ನೀಡಿದ್ದ ಮಧ್ಯಂತರ ತಡೆ ಮುಂದುವರಿದಿದ್ದು, ತಡೆಯಾಜ್ಞೆ ತೆರವಿಗೆ ಮಾಡಿದ ಮನವಿ ಪುರಸ್ಕರಿಸದೆ ಹೈಕೋರ್ಟ್ ವಿಚಾರಣೆಯನ್ನು ಮತ್ತೆ ಆ.2 ಕ್ಕೆ ಮುಂದೂಡಿದೆ. ಈ ಹಿನ್ನೆಲಿಯಲ್ಲಿ ರಾಜ್ಯಪಾಲರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮತ್ತು ಹಣಕಾಸು ಅಧಿಕಾರಿಗೆ ಸಂಬಳ ನೀಡುವ ಮತ್ತು ಪ್ರತಿನಿತ್ಯ ಅಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಮಾತ್ರ ಆದೇಶಿದ್ದಾರೆ. ಆದರೆ. 2000 ವಿಶ್ವವಿದ್ಯಾಲಯಗಳ ಕಾಯ್ದೆ ಪ್ರಕಾರ ಘಟಿಕೋತ್ಸವ ನಡೆಸಲು, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸಭೆ,ನಾನಾ ವಿಭಾಗಗಳ ಪರೀಕ್ಷಾ ಮಂಡಳಿಗಳ ನೇಮಕಾತಿ ಮಾಡಲು ಉಪಕುಲಪತಿಗಳು ಅಥವಾ ಪ್ರಭಾರ ವಿಸಿ ಆಗಿ ಡೀನ್ ಇರಬೇಕು, ರಾಜ್ಯಪಾಲರು ಹಿರಿಯ ಡೀನ್ ನೇಮಕ ಮಾಡಿದ್ದರೆ ಈ ಪ್ರಮಾಣದ ಸಮಸ್ಯೆ ಆಗುತ್ತಿರಲಿಲ್ಲ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಕುಲಪತಿಗಳಿಲ್ಲದೆ ಸಂಶೋಧನಾ ವಿದ್ಯಾರ್ಥಿಗಳ ಕೋರ್ಸ್ ವರ್ಕ್ ಪರೀಕ್ಷೆಯನ್ನು ಮುಂದೂಡಿದ್ದು, ಪ್ರಸಕ್ತ ವರ್ಷದ ಸೆಮಿಸ್ಟಾರ್ಶೈ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಪಠ್ಯ ಬೋಧನೆ. ಪರೀಕ್ಷೆ ನಡೆಸುವ ಬಗ್ಗೆ ಸೂಕ್ತ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗೆ ಶ್ಥಕ್ಷಣಿಕ ಚಟುವಟಿಕೆಗಳಿಗೆ ದಿನೇ ದಿನೇ ಹಿನ್ನಡೆಯಾಗುತ್ತಿದೆ. ಇದೇ ವೇಳೆ ಈಗ ನಿವೃತ್ತಿ ಹೊಂದಿರುವ ಬೋಧಕ ಬೋಧಕೇತರ ಸಿಬ್ಬಂದಿಗಳು ನಿವೃತ್ತಿ ಸಂಬಂಧಿತ ಹಣಕಾಸು ಸೌಲಭ್ಯಗಳು ಸಿಗದೆ ಪರಿಪಾಟಲು ಪಡುವಂತಾಗಿದೆ.
ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ.
ಉಪ ಕುಲಪತಿಗಳ ನೇಮಕಾತಿಯಿಂದ ಹಿಡಿದು ಎಲ್ಲಾ ಹಂತಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವೇ ಕಾರಣ. ರಾಜ್ಯಪಾಲರು ಹಿರಿಯ ಡೀನ್ ಅವರನ್ನು ಪ್ರಭಾರ ಕುಲಪತಿಯನ್ನಾಗಿ ಮಾಡದೇ ಇರುವುದು ಇದಕ್ಕೆಲ್ಲಾ ಕಾರಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಕತ್ತಲಿನಲ್ಲಿ ಮುಳುಗುತ್ತದೆ.
–ಡಾ.ಕೆ., ಮಹದೇವ್. ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯರು