ಸುದ್ದಿಮೂಲ ವಾರ್ತೆ
ಮೈಸೂರು,ಅ.28:ಶೀಘ್ರದಲ್ಲೇ ವೈದ್ಯಕೀಯ ಲೋಕಕ್ಕೆ ಆಮೂಲಾಗ್ರ ಬದಲಾವಣೆಗಳನ್ನು ತರುವ ಧ್ಯೇಯ ಕಾಂಗ್ರೆಸ್ ಸರ್ಕಾರದ್ದಾಗಿದೆ ಎಂದು ವೈದ್ಯಕೀಯ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ. ಶರಣ ಪ್ರಕಾಶ್ ಎಂ. ಪಾಟೀಲ್ ಹೇಳಿದ್ದಾರೆ.
ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಚಿವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು. ನಂತರ ಮಾತನಾಡಿದ ಸಚಿವರು, ಮೈಸೂರು ಜಿಲ್ಲೆಗೆ ಹಲವಾರು ವೈದ್ಯಕೀಯ ಸೌಲಭ್ಯಗಳನ್ನು ಸಿದ್ದರಾಮಯ್ಯ ರವರು ತಾವು ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದಾಗ ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿ ಮಾಡಿದ್ದಾರೆ. ಪ್ರಸಿದ್ಧ ಜಯದೇವ ಆಸ್ಪತ್ರೆ , ಜಿಲ್ಲಾ ಆಸ್ಪತ್ರೆ ,ಟ್ರಾಮ ಸೆಂಟರ್ ಹೀಗೆ ಹತ್ತು ಹಲವು ಜನ ಉಪಯೋಗಿ ಆಸ್ಪತ್ರೆಗಳನ್ನು ನೀಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.
ಮುಂಬರುವ ದಿನಗಳಲ್ಲಿ ಆಸ್ಪತ್ರೆಗಳ ಗುಣಮಟ್ಟ ಮತ್ತು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಮೂಲಕ ಮೇಲ್ದರ್ಜೆಗೆ ಏರಿಸಲು ಸರ್ಕಾರದ ಚಿಂತನೆ ನೆಡೆಸಲಾಗಿದೆ. ಹಲವಾರು ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ ಜೆ ವಿಜಯ್ ಕುಮಾರ್ ರವರು ಕೋವಿಡ್ ಅಂತ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದ ಆಸ್ಪತ್ರೆಗಳು ಇಲ್ಲದೆ ಹೋಗಿದ್ದರೆ ಬಹು ದೊಡ್ಡ ಅನಾಹುತಗಳೇ ಆಗುತ್ತಿದ್ದವು ಎಂದು ಹೇಳಿದರು.
ಆದರೆ ಕಾಂಗ್ರೆಸ್ ನಿರ್ಮಿಸಿದ ಆಸ್ಪತ್ರೆಗಳಿಗೆ ಕೋವಿಡ್ ಸಮಯದಲ್ಲಿ ಸರಿಯಾದ ಔಷಧಿಗಳನ್ನು ಬಿಜೆಪಿ ಸರ್ಕಾರ ಒದಗಿಸಲು ಸಾಧ್ಯವಾಗದೆ ಆಡಳಿತ ವೈಫಲ್ಯ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಬಿಜೆಪಿ ಸರ್ಕಾರ ಸಿಲುಕಿ , ಈಗ ಅದರ ಬಗ್ಗೆ ತನಿಖೆ ಆಗುತ್ತಿದೆ. ಭವಿಷ್ಯದ ಚಿಂತನೆ ಮತ್ತು ಆಲೋಚನೆ ಇಲ್ಲದ ಯಾವುದೇ ಪ್ರಜಾಸತ್ತಾತ್ಮಕ ಸರ್ಕಾರಗಳು ದೀರ್ಘಾವಧಿಯಲ್ಲಿ ಉಳಿಯುವುದು ಕಷ್ಟ ಸಾಧ್ಯ ಎಂದು ಹೇಳಿದರು.
ವಿಧಾನ ಪರಿಷತ್ತಿನ ಸದಸ್ಯ ಡಾ. ಡಿ.ತಿಮ್ಮಯ್ಯ, ಮಾಜಿ ಶಾಸಕ ಎಚ್.ಪಿ ಮಂಜುನಾಥ್, ಮಾಜಿ ವಿಧಾನ ಪರಿಷತ್ತಿನ ಸದಸ್ಯ ಅರುಣ್ ಮಾಚಯ್ಯ, ಡಿಸಿಸಿ ನಗರ ಅಧ್ಯಕ್ಷ ಆರ್. ಮೂರ್ತಿ ಹಾಗೂ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.