ಸುದ್ದಿಮೂಲ ವಾರ್ತೆ
ಆನೇಕಲ್, ಮೇ 22: ಪ್ರಯತ್ನ ಒಂದು ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಗ್ರಾಮೀಣ ಭಾಗದ ಮಕ್ಕಳು ಪ್ರತಿಷ್ಠಿತ ಶಾಲೆಗಳಿಗೆ ಸ್ಪರ್ಧೆ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ವಿಚಾರ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರೊ ಕಬಡ್ಡಿ ತೀರ್ಪುಗಾರ ಹಾಗೂ ಆನೇಕಲ್ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಗೋಪಾಲ್ ಹೇಳಿದರು.
ಆನೇಕಲ್ ತಾಲ್ಲೂಕಿನ ಇಗ್ಗಲೂರು ಸಮೀಪವಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಇಂದು ಐಸಿಎಸ್ಇ ನಲ್ಲಿ 100% ಫಲಿತಾಂಶ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ನ್ಯಾಷನಲ್ ಪಬ್ಲಿಕ್ ಶಾಲೆ ಪಡೆದುಕೊಂಡಿದೆ. ಒಟ್ಟು 43 ವಿದ್ಯಾರ್ಥಿಗಳ ಪೈಕಿ 37 ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ಶಿವಾಂಗಿ.ಆರ್ 99% ಅಂಕ ಪಡೆದು ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಚೇತನ ಎಮ್ ಗೌಡ 98%, ಹೇಮಚಂದ್ರ ಎಮ್ ರೆಡ್ಡಿ 98%, ಗಿರಿ ನಂದಿನಿ ಆರ್ 98%, ಅಂಕ ಪಡೆದು ವಿದ್ಯಾರ್ಥಿಗಳು ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ .
ಇನ್ನು ಇದೇ ವೇಳೆ ಮಾತನಾಡಿದ ಶಾಲೆಯ ಕಾರ್ಯದರ್ಶಿ ಪಳ್ಳಳ್ಳಪ್ಪ ಯಾದವ್, ಕಳೆದ 17 ವರ್ಷಗಳಿಂದ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಉತ್ತಮ ಪೋಷಕರು ಮತ್ತು ಉತ್ತಮ ಶಿಕ್ಷಣದಿಂದಾಗಿ ಸಾಧನೆ ಮಾಡಲು ಸಾಧ್ಯವಾಗಿದೆ. ಸತತ 9 ವರ್ಷಗಳಿಂದ 100ಕ್ಕೆ 100ರಷ್ಟು ಫಲಿತಾಂಶ ಬರುತ್ತಿದ್ದು, ಈ ವರ್ಷ 43 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 37 ಜನ ಡಿಸ್ಟಿಂಕ್ಷನ್ ಮತ್ತು 6 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಶಾಲೆಗೆ 100ಕ್ಕೆ 100 ರಷ್ಟು ಫಲಿತಾಂಶ ಬಂದಿದೆ. ಈ ನಾಲ್ಕು ಜನ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು . ಜೊತೆಗೆ ಎಲ್ಲಾ ಪೋಷಕರಿಗೂ ಅಭಿನಂದನೆಗಳನ್ನು ತಿಳಿಸಿದರು.
ವಿದ್ಯಾರ್ಥಿನಿ ಚೇತನಾ ಮಾತನಾಡಿ, ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನನ್ನ ಗುರಿ ಐಎಎಸ್ ಆಗುವ ಆಸೆ ಇದೆ. ಐಎಎಸ್ ಆದರೆ ಈಗಾಗಲೇ ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿದೆ. ಸರ್ಕಾರಿ ಶಾಲೆಗಳನ್ನ ಉಳಿಸುವುದಕ್ಕೆ ಪ್ರಯತ್ನವನ್ನು ಮಾಡುತ್ತೇನೆ. ನನಗೆ ಸಿಕ್ಕಿದ ಶಿಕ್ಷಣವನ್ನು ಎಲ್ಲರಿಗೂ ಸಿಗುವಂತ ಕೆಲಸ ನಾನು ಮಾಡುತ್ತೇನೆ. ಜತಗೆ ನನ್ನ ಸುತ್ತಮುತ್ತ ಇರುವ ಮಕ್ಕಳಿಗೆ ಉಚಿತ ಪಾಠವನ್ನು ಮಾಡಿಕೊಡುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ರಾಮರೆಡ್ಡಿ , ಕಾರ್ಯದರ್ಶಿಗಳು ಪಳ್ಳಳ್ಳಪ್ಪ ಯಾದವ್, ಪ್ರಾಂಶುಪಾಲರು ವೀಣಾ ಮೋಂಟಿ ಡಿಸೋಜಾ, ಪ್ರೌಢಶಾಲೆಯ ಇಂಚಾರ್ಜ್ ಸುಧಾ, ತರಗತಿ ಶಿಕ್ಷಕರು ಬಾನುಲೇಖ, ಮುರಳಿ ಮತ್ತು ಶಿಕ್ಷಕರು ಭಾಗವಹಿಸಿದ್ದರು.