ಬೆಂಗಳೂರು: ರಾಜ್ಯದಲ್ಲಿ ಗೆಲುವಿನತ್ತ ನಾಗಾಲೋಟ ಮುಂದುವರಿಸಿರುವ ಕಾಂಗ್ರೆಸ್ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಖಾತೆ ತೆರೆದಿದೆ.
ಚಾಮರಾಜಪೇಟೆಯಲ್ಲಿ ಹಾಲಿ ಶಾಸಕ ಜಮೀರ್ ಅಹಮದ್ ಖಾನ್ ಅವರು ಗೆಲುವು ಸಾಧಿಸಿದ್ದು, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮೊದಲ ಸೋಲಿನ ರುಚಿ ಕಂಡಿದ್ದಾರೆ.
ಐಪಿಎಸ್ ಅಧಿಕಾರಿಯಾಗಿ ನಿವೃತ್ತರಾದ ಬಳಿಕ ಮೊದಲಿಗೆ ಆಮ್ ಆದ್ಮಿ ಪಕ್ಷ ಸೇರಿದ್ದ ಭಾಸ್ಕರ್ ರಾವ್ ಅವರು ಬಳಿಕ ಬಿಜೆಪಿ ಸೇರಿದ್ದರು. ಬಸವನಗುಡಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಅವರಿಗೆ ಅನಿರೀಕ್ಷಿತವಾಗಿ ಚಾಮರಾಜಪೇಟೆ ಟಿಕೆಟ್ ನೀಡಲಾಗಿತ್ತು. ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಅಳುಕಿನಿಂದಲೇ ಸ್ಪರ್ಧಿಸಿದ್ದ ಭಾಸ್ಕರ್ ರಾವ್ ಸೋಲನ್ನು ಅನುಭವಿಸಿದ್ದಾರೆ.
ಇಲ್ಲಿ ಜಮೀರ್ ಅಹಮದ್ ಖಾನ್ ಪ್ರಭಾವ ಮೊದಲಿನಿಂದಲೂ ಉಳಿಸಿಕೊಂಡಿದ್ದು, ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.
ಇನ್ನು ಸರ್ವಜ್ಞನಗರದಲ್ಲಿ ಹಾಲಿ ಶಾಸಕ, ಮಾಜಿ ಸಚಿವ ಕೆ.ಜೆ. ಜಾರ್ಜ್ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಶಿವಾಜಿನಗರದಲ್ಲೂ ಸಹ ಹಾಲಿ ಶಾಸಕ ರಿಜ್ವಾನ್ ಆರ್ಷದ್ ಗೆಲುವು ಸಾಧಿಸಿದ್ದಾರೆ. ಇಲ್ಲಿ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೆ, ಮುಸ್ಲಿಮ್ ಪ್ರಭಾವ ಇರುವ ಕ್ಷೇತ್ರದಲ್ಲಿ ರಿಜ್ವಾನ್ ಆರ್ಷದ್ ಸುಲಭ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಹಾಲಿ ಶಾಸಕ ಎಂ. ಕೃಷ್ಣಪ್ಪ ಅವರು ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ನಿಂದ ಆರ್.ಕೆ. ರಮೇಶ್ ಸ್ಪರ್ಧಿಸಿದ್ದರು.
ಬಸವನಗುಡಿಯಲ್ಲಿ ಹಾಲಿ ಶಾಸಕ ರವಿಸುಬ್ರಹ್ಮಣ್ಯ ಅವರು ಸಹ ಗೆಲುವು ಸಾಧಿಸಿದ್ದಾರೆ. ಈ ಮೂಲಕ 2008, 2013 ಮತ್ತು 2018ರಲ್ಲಿ ಗೆಲುವು ಸಾಧಿಸಿದ್ದ ರವಿಸುಬ್ರಹ್ಮಣ್ಯ ಈಗ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ.