ವಿರೂಪಾಕ್ಷ ಹೊಕ್ರಾಣಿ
ಬೆಂಗಳೂರು, ಏ.2: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ಬಾಕಿ ಇರುವ 100 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚಟುವಟಿಕೆಗಳು ತೀವ್ರವಾಗಿವೆ. ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಏ.4 ರಂದು ಸಭೆ ಸೇರಲಿದ್ದು, ಅಂದೇ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ.
ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ಬಾಕಿ ಉಳಿದಿರುವ 100 ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಳೆದ ವಾರ ಅಂತಿಮಗೊಳಿಸಲಾಗಿತ್ತು. ಉಳಿದ 67 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ದೊಡ್ಡಬಳ್ಳಾಪುರ ಸಮೀಪದ ರೆಸಾರ್ಟ್ನಲ್ಲಿ ಸಭೆ ಸೇರಿ ಅಂತಿಮಗೊಳಿಸಲಾಗಿತ್ತು.
ಮಂಗಳವಾರ ಪಟ್ಟಿ ಬಿಡುಗಡೆ ಬಹುತೇಕ ಖಚಿತವಾಗಿರುವುದರಿಂದ ಮುಖಂಡರು ಮತ್ತು ಟಿಕೆಟ್ ಆಕಾಂಕ್ಷಿಗಳು ದೆಹಲಿಯತ್ತ ಬೀಡುಬಿಟ್ಟಿದ್ದಾರೆ. ಹಾಲಿ ಶಾಸಕರು ಮತ್ತು ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ನಿರಂತರ ಪ್ರಯತ್ನ ನಡೆಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವರುಣಾ ಜೊತೆಗೆ ಕೋಲಾರ ಕ್ಷೇತ್ರದಿಂದಲೂ ಸ್ಪರ್ಧಿಸಲು ನಿರ್ಧರಿಸಿದ್ದು, ಎರಡನೇ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದ ಟಿಕೆಟ್ ಘೋಷಣೆ ಬಹುತೇಕ ನಿಶ್ಚಿತವಾಗಿದೆ.
ಈ ಮಧ್ಯೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಕೂಡ್ಲಿಗಿಯ ಎನ್.ವೈ. ಗೋಪಾಲಕೃಷ್ಣ, ಇಂದು ಜೆಡಿಎಸ್ ತೊರೆದಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರಿಗೂ ಸಹ ಟಿಕೆಟ್ ಪಕ್ಕಾ ಆಗಿದ್ದು, ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡಲಾಗುತ್ತದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ಗೆ ಮರಳಿರುವ ಬಾಬುರಾವ್ ಚಿಂಚನಸೂರ್ ಅವರನ್ನು ಗುರುಮಠಕಲ್ನಿಂದ ಕಣಕ್ಕಿಳಿಸುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಒಲವು ಹೊಂದಿದ್ದಾರೆ. ದೇವರ ಹಿಪ್ಪರಗಿಗೆ ಎಸ್.ಆರ್. ಪಾಟೀಲ, ಧಾರವಾಡ ಉತ್ತರಕ್ಕೆ ಮೋಹನ್ ಲಿಂಬಿಕಾಯಿ, ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಯಲಹಂಕಕ್ಕೆ ಕೇಶವ ರಾಜಣ್ಣ ಹೆಸರು ಮುಂಚೂಣಿಯಲ್ಲಿವೆ. ಪಿ.ಜಿ.ಆರ್. ಸಿಂಧ್ಯ ಅವರ ಹೆಸರನ್ನು ಪದ್ಮನಾಭನಗರ ಕ್ಷೇತ್ರಕ್ಕೆ ಶಿಫಾರಸು ಮಾಡಲಾಗಿದ್ದು, ಅವರಿಗೂ ಟಿಕೆಟ್ ಬಹುತೇಕ ಪಕ್ಕಾ ಎನ್ನಲಾಗಿದೆ.
ಬಾಕಿ ಇರುವ ಕಾಂಗ್ರೆಸ್ನ 100 ಕ್ಷೇತ್ರಗಳ ಪೈಕಿ 52 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹೆಸರನ್ನು ಅಂತಿಮಗೊಳಿಸಲಾಗಿದೆ. ಉಳಿದ 48 ಕ್ಷೇತ್ರಗಳಿಗೆ ಕೆಲವೆಡೆ ಎರಡು- ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಏ.4ರ ಸಭೆಯ ಬಳಿಕ ಒಂದೇ ಹೆಸರು ಶಿಫಾರಸು ಮಾಡಲಾದ 52 ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಪುತ್ತೂರು, ಮಂಗಳೂರು ಉತ್ತರ, ಕಲಘಟಗಿ, ತೀರ್ಥಹಳ್ಳಿ, ದಾಸರಹಳ್ಳಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಜಟಿಲಗೊಂಡಿದೆ. ಪುತ್ತೂರಿನಲ್ಲಿ ಡಿಕೆಶಿ ಬೆಂಬಲಿತರ ಅಶೋಕ್ ರೈಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಮಂಗಳೂರು ಉತ್ತರದಲ್ಲೂ ಮೊಯಿನುದ್ದೀನ್ ಭಾವಾ ಹಾಗೂ ಇನಾಯತ್ ಅಲಿ ನಡುವೆ ಪೈಪೋಟಿ ಇದೆ.
ಇನ್ನು ನರಗುಂದಲ್ಲಿ ಕೋನರೆಡ್ಡಿ ಹಾಗೂ ವಿನೋದ್ ಅಸೂಟಿ. ಕಲಘಟಗಿಯಲ್ಲಿ ಸಂತೋಷ್ ಲಾಡ್ ಹಾಗೂ ನಾಗರಾಜ್ ಛಬ್ಬಿ, ಹಾಗೂ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ ಮತ್ತು ಮಂಜುನಾಥ್ ಗೌಡ ನಡುವೆ ಪೈಪೋಟಿ ಇದೆ. ಕೆಲವು ಅಭ್ಯರ್ಥಿಗಳಿಗೆ ಡಿಕೆಶಿ ಬೆಂಬಲ ನೀಡಿದರೆ ಮತ್ತೆ ಕೆಲವರಿಗೆ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ. ಪರಿಣಾಮ ಈ ಕ್ಷೇತ್ರಗಳ ಬಗ್ಗೆ ಒಂದು ನಿರ್ಧಾರವನ್ನು ಕೈಗೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ.
ಹೀಗಾಗಿ ಕೇವಲ ಒಂದೇ ಹೆಸರು ಶಿಫಾರಸು ಮಾಡಲಾದ ಕ್ಷೇತ್ರಗಳಿಗೆ ಮಂಗಳವವಾರ ಟಿಕೆಟ್ ಘೋಷಣೆಯಾಗುತ್ತದೆ. ಬಾಕಿ ಕ್ಷೇತ್ರಗಳಿಗೆ ಟಿಕೆಟ್ ಏ.10ರ ಆಸುಪಾಸಿನಲ್ಲಿ ಘೋಷಣೆ ಮಾಡಲಾಗುತ್ತದೆ ಎಂದೂ ಸಹ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಮಂಗಳವಾರವಷ್ಟೇ ಸ್ಪಷ್ಟತೆ ಸಿಗಲಿದೆ.