ಸುದ್ದಿಮೂಲ ವಾರ್ತೆ
ಮೈಸೂರು, ಸೆ.4:ಬಿಜೆಪಿ ಮಂದಿಗೆ 40 ಅಲ್ಲ, 4 ಶಾಸಕರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, .ಬಿಜೆಪಿ ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಕೇವಲ ಸುಳ್ಳು ಆಶ್ವಾಸನೆ ನೀಡುತ್ತಾ ಕಾಲ ಕಳೆದಿದ್ದರು. ಹೀಗಾಗಿ, ಜನತೆ ಬಿಜೆಪಿಯನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಛೇಡಿಸಿದರು.
ಕಾಂಗ್ರೆಸ್ ಗೆ ಶಾಸಕರ ಅಪರೇಷನ್ ಮಾಡುವ ಸ್ಥಿತಿ ಬಂದಿಲ್ಲ. 136 ಮಂದಿ ಶಾಸಕರಿದ್ದೇವೆ. ಅಪರೇಷನ್ ಹಸ್ತ ಮಾಡುವ ಅಗತ್ಯ ನಮಗೆ ಇಲ್ಲ. ನಮ್ಮ ಗ್ಯಾರಂಟಿಗಳಿಗೆ ಸಂಪೂರ್ಣ ಹೆದರಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ನಾಲ್ಕು ವರ್ಷ ಬಿಜೆಪಿಯ ದುರಾಡಳಿತವನ್ನು ಜನತೆ ನೋಡಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಲಾಟರಿ ಮುಖ್ಯಮಂತ್ರಿ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕೆ.ಎಸ್.ಈಶ್ವರಪ್ಪ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ.ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಕೆ.ಎಸ್.ಈಶ್ವರಪ್ಪ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಎಚ್ಚರಿಕೆ ನೀಡಿದರು.
ಸಾಹಿತಿ ದೇವನೂರ ಮನೆಗೆ ಭೇಟಿ
ಮೈಸೂರಿನ ಕುವೆಂಪುನಗರದ ನವಿಲು ರಸ್ತೆಯಲ್ಲಿರುವ ಸಾಹಿತಿ ದೇವನೂರ ಮಹಾದೇವ ಅವರ ನಿವಾಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಭೇಟಿ ನೀಡಿ, ಕುಶಲೋಪರಿ ವಿಚಾರಿಸಿದರು.