ಸುದ್ದಿಮೂಲ ವಾರ್ತೆ
ಬಾಗಲಕೋಟೆ, ಮಾ. 21: ಕಾಂಗ್ರೆಸ್ನದ್ದು ಮಹಿಳೆಯರು, ಯುವಕರನ್ನು ಯಾಮಾರಿಸುವ ಗ್ಯಾರಂಟಿಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ಅವರು ಇಂದು ಮುಧೋಳದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಬೊಗಸ್ ಗ್ಯಾರಂಟಿಗಳನ್ನು ಕೊಡುವುದಿಲ್ಲ. ನಮ್ಮ ಕೆಲಸ ನಮ್ಮ ಗ್ಯಾರಂಟಿ. ಜನರಿಗೆ ಮುಟ್ಟಿರುವ ಗ್ಯಾರಂಟಿ ಇದು. ನಮ್ಮ ಕೆಲಸಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಗ್ಯಾರಂಟಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ನಿರುದ್ಯೋಗ ಭತ್ಯೆ ರಾಹುಲ್ ಗಾಂಧಿಯಿಂದ ಪ್ರಾರಂಭಿಸಬೇಕು. ನಿರುದ್ಯೋಗಿಗಳಿಗೆ ಮೂರು ಸಾವಿರ ನೀಡುವುದಾಗಿ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರಿಂದಲೇ ಪ್ರಾರಂಭವಾಗಬೇಕು ಎಂದರು.
ನಿರುದ್ಯೋಗಿಗಳಿಗೆ ಭತ್ಯೆ ಬಗ್ಗೆ ರಾಜಸ್ತಾನ, ಛತ್ತೀಸ್ಗಢದಲ್ಲಿಯೂ ಹೇಳಿದ್ದರು. ಆದರೆ, ಅನುಷ್ಠಾನವಾಗಿಲ್ಲ. ಅವರು ಹತಾಶರಾಗಿದ್ದಾರೆ. ಅವರಿಗೆ ಆಂತರಿಕ ಸಮೀಕ್ಷೆಯಲ್ಲಿ ಗೆಲ್ಲುವುದಿಲ್ಲ ಎಂದು ತಿಳಿದಿದೆ. ಶೇ 3-4 ರಷ್ಟು ಮತ ಗೆಲ್ಲಲು ಈ ರೀತಿಯ ಆಗಲಾರದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ರಾಜಸ್ತಾನ ಅಥವಾ ಛತ್ತೀಸ್ಗಢ ಅಲ್ಲ. ಕರ್ನಾಟಕದ ಜನ ಬಹಳ ಪ್ರಬುದ್ಧರಿದ್ದಾರೆ. ಯಾರು ಯಾಕೆ ಮಾತನಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.
ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಹೇಳಿದರು.
2ಎ: ಸಂಪುಟ ಸಭೆಯ ನಂತರ ಮಾಹಿತಿ:
ಮಾ. 24 ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಆ ಬಳಿಕ ಪಂಚಮಸಾಲಿಗಳಿಗೆ 2 ಎ ಮೀಸಲಾತಿ ನೀಡುವ ಬಗ್ಗೆ ಮಾಹಿತಿ ಸಿಗಲಿದೆ ಎಂದು ಮುಖ್ಯಮಂತ್ರಿ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ನೀರಾವರಿ, ಕುಡಿಯುವ ನೀರು, ರೈತರಿಗೆ ಅನುಕೂಲವಾಗುವ ಯೋಜನೆ, ಕೈಗಾರಿಕಾ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳಿಗೆ ಒಟ್ಟು ನೀಡಲಾಗಿದೆ. ಹುನಗುಂದ ಮತ್ತು ಮುಧೋಳದಲ್ಲಿ ವಿವಿಧ ಕಟ್ಟಡಗಳ ಉದ್ಘಾಟನೆ ಮಾಡಲಾಗಿದೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ 1600 ಕೋಟಿ ರೂ.ಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರಲ್ಲದೇ ಕಳೆದ ಮೂರು ವರ್ಷಗಳ ಸರ್ಕಾರದ ನಿರ್ಣಯ, ಬಿಡುಗಡೆ ಮಾಡಿರುವ ಅನುದಾನ ಮತ್ತು ಅನುಷ್ಠಾನದ ಫಲವಾಗಿ ಇದಾಗುತ್ತಿದೆ. ನಮ್ಮ ಕೆಲಸಗಳು ಮಾತನಾಡಬೇಕು ಎಂದರು.