ಸುದ್ದಿಮೂಲ ವಾರ್ತೆ
ಬೆಳಗಾವಿ, ಏ.30: ರಾಜ್ಯ ಬಿಜೆಪಿ ಸರ್ಕಾರ ನಿಯತ್ತ ಆರಂಭದಲ್ಲಿಯೇ ಹಾಳಾಗಿದ್ದು, ಇದರಿಂದ ಆಡಳಿತ ಕುಸಿದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಖಾನಾಪುರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜನರು ಆರಿಸಿದ ಸರ್ಕಾರವನ್ನು ಶಾಸಕರ ಖರೀದಿ ಮೂಲಕ ಬೀಳಿಸಿ ಬಿಜೆಪಿಯವರು ಸರ್ಕಾರ ರಚಿಸಿದ್ದಾರೆ. ಇಂತಹ ಸರ್ಕಾರದ ನಿಯತ್ತು ಆರಂಭದಲ್ಲೇ ಹಾಳಾಗಿತ್ತು. ಇಬ್ಬರು ಮುಖ್ಯಮಂತ್ರಿಗಳು ಬಂದರು. ಪರಿಣಾಮ ಅಭಿವೃದ್ಧಿ ಸ್ಥಗಿತವಾಗಿತ್ತು. ಈ ಸರ್ಕಾರ ಎಲ್ಲ ಹಂತದಲ್ಲಿ ರಾಜ್ಯವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.
ಎರಡು ರೀತಿಯ ಸರ್ಕಾರ ನೋಡಬಹುದು. ಒಂದು ಸರ್ಕಾರ ಜನರ ಬಳಿ ಹೋಗಿ ಅವರ ಕಷ್ಟ ಅರಿತು ಅವರಿಗೆ ಪರಿಹಾರ ನೀಡುತ್ತದೆ. ಮತ್ತೊಂದು ರೀತಿಯ ಸರ್ಕಾರ ಜನರ ಬಗ್ಗೆ ಕಾಳಜಿ ತೋರುವುದಿಲ್ಲ. ಅಧಿಕಾರ ಸಿಗುತ್ತಿದ್ದಂತೆ ಹಣ ಮಾಡಲು ಮುಂದಾಗುತ್ತಾರೆ. ಅವರು ಜನರಿಗೆ ಉತ್ತರ ನೀಡುವುದಿಲ್ಲ, ನಾವು ಏನು ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿಗೆ ಹೋಗುತ್ತಾರೆ. ಕರ್ನಾಟಕದಲ್ಲಿ ಮೂರೂವರೆ ವರ್ಷಗಳ ಹಿಂದೆ ಇಂತಹುದೇ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಎಂದರು.
ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ದೇಶಾದ್ಯಂತ ಕುಖ್ಯಾತಿ ಪಡೆದಿದೆ. ಇನ್ನು ದೇಶದಲ್ಲಿ ಬೆಲೆ ಏರಿಕೆ ಎಗ್ಗಿಲ್ಲದೆ ಸಾಗಿದೆ. ಅಡುಗೆ ಸಿಲಿಂಡರ್ 1100 ರೂ. ಆಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜಿಎಸ್ ಟಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಸಂಸಾರ ನಿಭಾಯಿಸುವುದು ಬಹಳ ಕಷ್ಟವಾಗಿದೆ. ಇದರಿಂದ ಮಹಿಳೆಯರು ಬಹಳ ಸಂಕಷ್ಟವಾಗಲಿದೆ. ರೈತರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೃಷಿಯ ಪ್ರತಿ ಸಲಕರಣೆ ಮೇಲೆ ಜಿಎಸ್ ಟಿ ವಿಧಿಸಲಾಗಿದೆ. ಇದರ ಮಧ್ಯೆ ರೈತ ಶ್ರಮವಹಿಸಿದರೂ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದರು.
ಇಲ್ಲಿರುವ ಯುವಕರಿಗೆ ಸರ್ಕಾರ ಉದ್ಯೋಗ ನೀಡಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಯಾವುದನ್ನು ಸರ್ಕಾರ ತುಂಬಿಲ್ಲ. ಎಲ್ಲಾ ನೇಮಕಾತಿಯಲ್ಲಿ ಅಕ್ರಮ ಮಾಡಿ ಯುವಕರ ಭವಿಷ್ಯ ನಾಶ ಮಾಡಲಾಗಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನ್ಯಾಯ ಮಾಡಲಾಗುತ್ತಿದೆ.
ಈ ಸರ್ಕಾರ ಎಲ್ಲ ಹಂತದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. ನೇಮಕಾತಿ, ಕೋವಿಡ್, ಗುತ್ತಿಗೆಯಲ್ಲಿ, ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಹಗರಣ ಮಾಡಿದ್ದಾರೆ. ಭ್ರಷ್ಟಾಚಾರದಿಂದ ಗುತ್ತಿಗೆದಾರರು ಸತ್ತರೂ ಪ್ರಧಾನಮಂತ್ರಿಗಳಿಂದ ಉತ್ತರ ಇಲ್ಲ. ಈ ಭ್ರಷ್ಟ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಆಡಳಿತ ಮಾಡಿದರೆ ನಿಮ್ಮ ಭವಿಷ್ಯದ ಗತಿ ಏನು? ಎಲ್ಲದಕ್ಕೂ ಲಂಚ ನೀಡುವುದಾದರೆ ಪರಿಶ್ರಮಕ್ಕೆ ಬೆಲೆ ಏನು? ರೈತ ಲಂಚ ನೀಡಲಾಗಿದೆ ತನ್ನ ಎತ್ತುಗಳನ್ನು ನೀಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸರ್ಕಾರ ಬೇಕೇ? ಬದಲಾವಣೆ ಬೇಕೇ ಎಂದು ನೀವೇ ಆಲೋಚಿಸಬೇಕು ಎಂದು ಹೇಳಿದರು
ಬಿಜೆಪಿ ಎಂದು ಕೊಟ್ಟ ಮಾತಿಗೆ ತಕ್ಕಂತೆ ನಡೆಯುವುದಿಲ್ಲ. ಕಾಂಗ್ರೆಸ್ ಕೊಟ್ಟ ಭರವಸೆ ಈಡೆರಿಸಿವೆ. ರಾಜಸ್ಥಾನದಲ್ಲಿ ರೈತರ ಸಾಲ ಮನ್ನಾ, ಹಿಮಾಚಲ ಪ್ರದೇಶದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ನೀಡಿತ್ತು. ಕಾಂಗ್ರೆಸ್ ಮುಂದೆ ಸರ್ಕಾರ ರಚಿಸಿದರೆ ಜನರಿಗಾಗಿ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ ಎಂದು ಪ್ರಿಯಾಂಕ ಮನವರಿಕೆ ಮಾಡಿಕೊಟ್ಟರು.