ಬೆಂಗಳೂರು,ಅ.19: ಬಿಜೆಪಿ ವಿರುದ್ಧ ಆರೋಪ ಮಾಡುವ ಡಿ.ಕೆ.ಶಿವಕುಮಾರರಿಂದ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗಳಿಗೆ ಉತ್ತರ ನೀಡಿದರು. ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಬೆಳಗಾವಿಗೆ ಹೋಗಿದ್ದು, ಯಾವುದೇ ಕಾಂಗ್ರೆಸ್ ಶಾಸಕರು ಅವರನ್ನು ಸ್ವಾಗತಿಸಿಲ್ಲ. ಐಟಿ ದಾಳಿಯಲ್ಲಿ ಲಭಿಸಿದ ಕೋಟ್ಯಂತರ ರೂಪಾಯಿ ಹಣದ ವಿಚಾರದಲ್ಲಿ ಕಾಂಗ್ರೆಸ್ನವರ ಪಾತ್ರ ಇದೆ ಎಂಬುದು ಗೊತ್ತಾಗಿದೆ. ಎಟಿಎಂ ಸರಕಾರಕ್ಕೆ ಇನ್ನೊಂದಷ್ಟು ಏನಾದರೂ ಬಲಿಷ್ಠ ಮಾಡಲು ಅವರು ಬೆಳಗಾವಿಗೆ ತೆರಳಿರಬಹುದೇ ಎಂಬ ಪ್ರಶ್ನೆ ಕೇಳಿಸಿದೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ಸಿನ ಒಳಗೆ ತಳಮಳದ ಘಟನೆಗಳು ನಡೆಯುತ್ತಿವೆ. ಇದರಲ್ಲಿ ಬಿಜೆಪಿ ಪಾತ್ರವೇನೂ ಇಲ್ಲ; ಆದರೆ, ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದ ದುಸ್ಥಿತಿಗೆ ತಲುಪಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಪಾತ್ರವಿದೆ ಎಂದಿದ್ದರೆ ಆ ಕುರಿತು ತನಿಖೆ ಮಾಡಿಸಿ ಎಂದು ಸವಾಲೆಸೆದರು.
ಕಾಂಗ್ರೆಸ್ ಪಕ್ಷದ ವಿರುದ್ಧ ಬಂದ ಭ್ರಷ್ಟಾಚಾರದ ಆರೋಪಗಳನ್ನು ಮರೆಮಾಚಲು ಶಿವಕುಮಾರರು ಈ ಥರದ ಹೇಳಿಕೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಗಾಳಿಯಲ್ಲಿ ಗುಂಡು ಹೊಡೆಯದಿರಿ ಎಂದು ಆಕ್ಷೇಪಿಸಿದರು.
ಡಿ.ಕೆ.ಶಿವಕುಮಾರ್ ಅವರ ಬಳಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಲಭಿಸಿದ ಕುರಿತಂತೆ ಶೀಘ್ರವಾಗಿ ತನಿಖೆ ನಡೆಸಲು ಹೈಕೋರ್ಟ್ ಒಪ್ಪಿದೆ. ಅವರ ಹಣದ ಕುರಿತು ಸಾಕಷ್ಟು ತೀವ್ರಗತಿಯಲ್ಲಿ ಸಿಬಿಐ ತನಿಖೆ ಮಾಡಿ ಅದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು. ಆ ಮೂಲಕ ಡಿ.ಕೆ.ಶಿವಕುಮಾರ್ ಅವರ ತಪ್ಪುಗಳನ್ನು ಸಾಬೀತುಪಡಿಸಲಿ ಎಂದು ವಿನಂತಿಸಿದರು.
ವಿಧಾನಸೌಧದಲ್ಲಿ ಅರಸಿನ, ಕುಂಕುಮ ಬಳಕೆ ಬೇಡ ಎಂಬ ಆದೇಶದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ತುಷ್ಟೀಕರಣದ ಪರಮೋಚ್ಚ ಸ್ಥಿತಿಗೆ ತಲುಪಿದ್ದಾರೆ. ವಿಧಾನಸೌಧದಲ್ಲಿ ಕುಂಬಳಕಾಯಿ ಒಡೆದರೆ, ಅರಸಿನ, ಕುಂಕುಮ ಹಾಕಿದರೆ ಮುಖ್ಯಮಂತ್ರಿಗಳಿಗೆ ಏನು ಸಮಸ್ಯೆ ಆಗುತ್ತದೆ? ಎಂದ ಅವರು, ಭ್ರಷ್ಟಾಚಾರದ ಆರೋಪದ ಕುರಿತ ಗಮನವನ್ನು ಬೇರೆಡೆ ಸೆಳೆಯಲು ಸಿಎಂ, ಡಿಸಿಎಂ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ದೂರಿದರು.