ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 2: ಕಾಂಗ್ರೆಸ್ ಈಗಾಗಲೇ ಘೋಷಿಸಿರುವ ಗ್ಯಾರಂಟಿಗಳ ಜೊತೆಗೆ ಮೀಸಲಾತಿಯನ್ನು ಶೇ 75ಕ್ಕೆ ಹೆಚ್ಚಳ ಮಾಡುವುದು, ನೂತನ ಪೆನ್ಷನ್ ಯೋಜನೆ ರದ್ದು ಮತ್ತು 1 ರಿಂದ 5ನೇ ತರಗತಿ ವರೆಗೆ ಪ್ರತೀ ವಿದ್ಯಾರ್ಥಿಗಳಿಗೆ ಮಾಸಿಕ 150 ರೂಪಾಯಿ, 6 ರಿಂದ 10 ರವರೆಗೆ ಮಾಸಿಕ 300 ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಲಾಗಿದೆ.
‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಘೋಷಣೆಯ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಖಾಸಗಿ ಹೋಟೆಲ್ನಲ್ಲಿ ಬಿಡುಗಡೆ ಮಾಡಿದರು.
ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ 200 ಯುನಿಟ್ ವಿದ್ಯುತ್ ಉಚಿತ, ಯುವನಿಧಿ ಮೂಲಕ ಪದವೀಧರರಿಗೆ 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ಮಾಸಿಕ ನಿರುದ್ಯೋಗ ಭತ್ಯೆ, ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಉಚಿತ ಅಕ್ಕಿ, ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳು ಮನೆಯೊಡತಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಪ್ರೋತ್ಸಾಹ ಧನ, ಮಹಿಳೆಯರಿಗೆ ಸಾರ್ವಜನಿಕ ಬಸ್ಗಳಲ್ಲಿ ಉಚಿತ ಪ್ರಯಾಣ ಘೋಷಣೆಗಳನ್ನು ಸರ್ಕಾರ ಬಂದ ಮೊಲದ ಕ್ಯಾಬಿನೆಟ್ ಸಭೆಯಲ್ಲಿಯೇ ಜಾರಿ ಮಾಡುವ ನಿರ್ಧಾರ ಮಾಡಲಾಯಿತು.
ಇನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ 15 ಸಾವಿರಕ್ಕೆ ಹೆಚ್ಚಳ, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 10 ಸಾವಿರಕ್ಕೆ, ವಿಶ್ರಾಂತಿ ವೇತನ 2 ಲಕ್ಷಕ್ಕೆ ತೀರ್ಮಾನಿಸಲಾಗಿದೆ.
ಸಾವಿತ್ರಿ ಫುಲೆ ಅವರ ಹೆಸರಲ್ಲಿ ಕಾರ್ಯಕ್ರಮ ರೂಪಿಸಿದ್ದು, 1 ರಿಂದ 5ನೇ ತರಗತಿ ವರೆಗೆ ಪ್ರತೀ ವಿದ್ಯಾರ್ಥಿಗೆ ಮಾಸಿಕ 150 ರೂಪಾಯಿ ನೀಡುವುದು, 6 ರಿಂದ 10 ರವರೆಗೆ ಮಾಸಿಕ 300 ರೂಪಾಯಿ ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ. ಬಹಳಷ್ಟು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಖರೀದಿಸಲು ಹಣವಿರಲ್ಲ, ದೂರದ ಊರುಗಳಿಂದ ಶಾಲೆಗೆ ಬರಲು ಕಷ್ಟವಾಗುತ್ತಿದೆ. ಹೀಗಾಗಿ ವಿದ್ಯಾರ್ಥನಿಯರಿಗೆ ಆರ್ಥಿಕ ಸಹಾಯ ಮಾಡಲು ನಿರ್ಧರಿಸಲಾಗಿದ್ದು, ಈ ಪ್ರೋತ್ಸಾಹಧನ ತಾಯಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಜಮೆ ಆಗುತ್ತದೆ. ಇದರ ಜೊತೆಗೆ ಶಾಲಾ ಹೆಣ್ಣು ಮಕ್ಕಳು ಸೇರಿದಂತೆ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪಾಸ್ ನೀಡುವ ಘೋಷಣೆ ಮಾಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನನಗೆ ಬೇರೆ ರಾಜ್ಯಗಳಿಂದ ದೂರವಾಣಿ ಕರೆ ಹಾಗೂ ಪತ್ರ ಬರುತ್ತಿದ್ದು, ನಿಮ್ಮ ಗ್ಯಾರಂಟಿ ಕಾರ್ಡ್ ಹೆಚ್ಚು ಪರಿಣಾಮಕಾರಿಯಾಗಿದ್ದು, ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ. ನಾವು ಟೊಳ್ಳು ಭರವಸೆ ನೀಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂರುವುದು ನಿಶ್ಚಿತ, ನಮ್ಮ 150 ಕ್ಷೇತ್ರಗಳ ಗುರಿ ತಲುಪುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೀಸಲಾತಿ ಶೇ.75ಕ್ಕೆ ಹೆಚ್ಚಳ:
ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಮುಸ್ಲಿಮರ ಶೇ 4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು ಅದನ್ನು ತಲಾ ಶೇ 2ರಂತೆ ಲಿಂಗಾಯತರು ಮತ್ತು ಒಕ್ಕಲಿಗರಿ ಹಂಚಿಕೆ ಮಾಡಿದೆ. ಆದರೆ, ಲಿಂಗಾಯತರು ಮತ್ತು ಒಕ್ಕಲಿಗರ ಬೇಡಿಕೆ ಇರುವುದು ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಬೇಕು ಎಂಬುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ. 50 ಮಿತಿಯನ್ನು ಶೇ 75ಕ್ಕೆ ಹೆಚ್ಚಿಸಲಾಗುವುದು. ಆ ಮೂಲಕ ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರು ಇವರೆಲ್ಲರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸಲು ಆಗಲ್ಲ, ಹಾಗೆ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದನ್ನು ಅವರಿಂದ ನಾನು ನಿರೀಕ್ಷೆ ಮಾಡಿರಲಿಲ್ಲ. ಹಾಗಾದರೆ ಈಗ ಬಿಜೆಪಿ ಕೊಟ್ಟಿರುವ ಭರವಸೆಗಳ ಕತೆ ಏನು? ರಾಜ್ಯ ದಿವಾಳಿಯಾಗಲ್ವಾ? ಬಿಜೆಪಿ ಸರ್ಕಾರ ಮಾಡಿರುವ ಸಾಲದ ಹೊರೆಯಿಂದಾಗಿ ಪ್ರತೀ ವರ್ಷ 56,000 ಕೋಟಿ ಹಣವನ್ನು ಅಸಲು ಮತ್ತು ಬಡ್ಡಿ ರೂಪದಲ್ಲಿ ಕಟ್ಟಬೇಕಾಗಿದೆಯಲ್ಲ ಇದಕ್ಕೆ ಎಲ್ಲಿಂದ ಹಣ ತರುತ್ತಾರೆ? ನರೇಂದ್ರ ಮೋದಿ ಅವರಿಗೆ ರಾಜ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು 13 ಬಜೆಟ್ ಗಳನ್ನು ಮಂಡಿಸಿರುವುದರಿಂದ ಕರ್ನಾಟಕದ ಹಣಕಾಸಿನ ಸ್ಥಿತಿಯ ಪೂರ್ಣ ಅರಿವು ನನಗಿದೆ. ನಾವೇನು ಈಗ 5 ಗ್ಯಾರೆಂಟಿಗಳನ್ನು ಕೊಟ್ಟಿದ್ದೇವೆ ಜೊತೆಗೆ ನಮ್ಮ ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆಗಳನ್ನು ಚಾಚು ತಪ್ಪದೆ ಜಾರಿ ಮಾಡುತ್ತೇವೆ. ನಮ್ಮ 5 ಗ್ಯಾರೆಂಟಿಗಳನ್ನಂತೂ ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಿ ಜಾರಿಗೆ ಕೊಡುತ್ತೇವೆ. ನರೇಂದ್ರ ಮೋದಿ ಅವರು ಜನರಿಗೆ ತಪ್ಪು ಮಾಹಿತಿ ಕೊಡಲು ಹೋಗಬೇಡಿ ಎಂದು ಅವರನ್ನು ಆಗ್ರಹಿಸುತ್ತೇನೆ. ರಾಜ್ಯದ ಜನ ಬಿಜೆಪಿಯವರ ಮಾತುಗಳನ್ನು ಕೇಳಲು ಹೋಗಬೇಡಿ ಅವರು ಸುಳ್ಳು ಹೇಳುತ್ತಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ತನ್ನ ಯೋಜನೆಗಳನ್ನು ಜಾರಿಗೆ ಬದ್ಧವಾಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಪ್ರಣಾಳಿಕೆ ಪೂರಕವಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಗ್ಲೋಬಲ್ ಬೆಂಗಳೂರು ನಿರ್ಮಾಣಕ್ಕೆ ಈ ಪ್ರಣಾಳಿಕೆ ಅಡಿಪಾಯ ಹಾಕಿದೆ. ಬೆಂಗಳೂರು ನಗರ 32% ನಷ್ಟು ಜನಸಂಖ್ಯೆ ಇದೆ. ಬೆಂಗಳೂರಿನ ಹಳೆಯ ಭವ್ಯ ವೈಭವ ಮರು ಸ್ಥಾಪನೆಗೆ, ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.
———————————
ಪ್ರಣಾಳಿಕೆಯ ಪ್ರಮುಖ ಅಂಶಗಳು:
* ಹಾಲಿನ ಸಬ್ಸಿಡಿಯನ್ನು ಪ್ರತಿ ಲೀಟರ್ ಗೆ 5ರಿಂದ 7 ರೂ.ಗೆ ಹೆಚ್ಚಳ
* ಬಿಜೆಪಿ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ರದ್ದು
* ರೈತರ ಮೇಲೆ ದಾಖಲಾಗಿರುವ ರಾಜಕೀಯ ಪ್ರೇರಿತ ಪ್ರಕರಣಗಳು ವಾಪಸ್
* ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯ್ದೆ ತಿದ್ದುಪಡಿ
* ಮೀನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿ ತರಲು ಇದರಲ್ಲಿ 12 ಸಾವಿರ ಕೋಟಿಯ ನೀಲ ಆರ್ಥಿಕತೆ
* ನೀರಾವರಿ ಯೋಜನೆಗಳಲ್ಲಿ ಒಟ್ಟು 5 ವರ್ಷಗಳಲ್ಲಿ 1.5 ಲಕ್ಷ ಕೋಟಿ ಮೀಸಲು
* ಮೇಕೆದಾಟಿಗೆ 9 ಸಾವಿರ ಕೋಟಿ, ಮಹದಾಯಿ ಯೋಜನೆಗೆ 3 ಸಾವಿರ ಕೋಟಿ
* ಎತ್ತಿನಹೊಳೆ ಯೋಜನೆ 2 ವರ್ಷಗಳಲ್ಲಿ ಪೂರ್ಣ
* ಗಡಿ ಭಾಗ ಅಭಿವೃದ್ಧಿಗೆ 5 ಸಾವಿರ ಕೋಟಿ ಮೀಸಲು
* ಎಂಎಸ್ಎಂಇ ಗಳ ನಿರ್ಲಕ್ಷ್ಯ ಹಾಗೂ ಸಮಸ್ಯೆಗೆ ಪರಿಹಾರ ನೀಡಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು 1 ಸಾವಿರ ಕೋಟಿ.
* ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು 5 ಸಾವಿರ ಕೋಟಿ ಮೀಸಲು
* 200 ಯುನಿಟ್ ವಿದ್ಯುತ್ ಉಚಿತ ನೀಡಲು 5 ಸಾವಿರ ಮೆ.ವ್ಯಾಟ್ ಉತ್ಪಾದನೆಗೆ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣ
* ಶಿಕ್ಷಣದಲ್ಲಿ ಅವೈಜ್ಞಾನಿಕ ಎನ್ಇಪಿ ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿ ಅನುಷ್ಠಾನ
* ವರ್ಷಕ್ಕೆ 2500 ಶಾಲೆಗಳ ಉನ್ನತೀಕರಣ.
* ಪ್ರತಿ ಕಂದಾಯ ವಿಭಾಗದಲ್ಲಿ ಜಯದೇವಾ ಹೃದ್ರೋಗ ಆಸ್ಪತ್ರೆ ಮಾದರಿಯಲ್ಲಿ ಹಾಗೂ ಕಿದ್ವಾಯಿ ಹಾಗೂ ನಿಮ್ಹಾನ್ಸ್ ಮಾದರಿಯ ಕ್ಯಾನ್ಸರ್ ಹಾಗೂ ಮನೋರೋಗ ಆಸ್ಪತ್ರೆಗಳ ನಿರ್ಮಾಣ.
* ಎಲ್ಲಾ ವಸತಿ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ.
* ವಾರ್ಷಿಕ 500ನಂತೆ 2500 ಕೋಟಿ ಮೀಸಲಿಟ್ಟು ನಾರಾಯಣ ಗುರು ಅಭಿನೃದ್ಧಿ ನಿಗಮ
* ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ 5000 ಕೋಟಿ ರೂ.
* ಬಳ್ಳಾರಿ ಜೀನ್ಸ್ ಉದ್ಯಮ ಪ್ರೋತ್ಸಾಹಕ್ಕೆ 5000 ಕೋಟಿ ಹೂಡಿಕೆಯಲ್ಲಿ ಅಪೆರೆಲ್ಸ್ ಪಾರ್ಕ್
* ಬೀದರ್ನಲ್ಲಿ ಐಐಟಿ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯ
* ಗ್ರಾಮ ಪಂಚಾಯತ್ಗಳಿಗೆ ವಾರ್ಷಿಕ ತಲಾ 1 ಕೋಟಿ ರೂ. ಅನುದಾನ
* ಕಲ್ಯಾಣ ಕರ್ನಾಟಕ 41 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕನಿಷ್ಠ 100ಪಿಯುಸಿ, ಒಂದು ಮಹಿಳಾ ಪದವಿ ಕಾಲೇಜು ಸ್ಥಾಪನೆ
* ಒಂದು ವರ್ಷದಲ್ಲಿ ಕಕ ಭಾಗದ ಎಲ್ಲಾ ಬ್ಯಾಕ್ಲಾಗ್ ಹುದ್ದೆ ಭರ್ತಿ
* ಸಿಂಧನೂರಿನಲ್ಲಿಅಕ್ಕಿ ತಂತ್ರಜ್ಞಾನ ಕೇಂದ್ರ
* ಕಲಬುರ್ಗಿ-ಸಿರಗುಪ್ಪ- ಬಳ್ಳಾರಿ ಹೆದ್ದಾರಿ ಷಟ್ಪಥವಾಗಿ ಅಗಲೀಕರಣ