ಸುದ್ದಿಮೂಲ ವಾರ್ತೆ
ನವದೆಹಲಿ, ಏ.5: ಕಾಂಗ್ರೆಸ್ನ ಎರಡನೇಯ ಪಟ್ಟಿ ಅಂತಿಮಗೊಳಿಸಲು ಇಂದು ನವದೆಹಲಿಯಲ್ಲಿ ಸೇರಿದ ಎಐಸಿಸಿಯ ಚುನಾವಣಾ ಸಮಿತಿ ರಾಜ್ಯದ 49 ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊಳಿಸಿರುವುದಾಗಿ ಗೊತ್ತಾಗಿದೆ.
ಇಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪರಿಶೀಲನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್ ಸಮಕ್ಷಮ ರಾಜ್ಯದ ಕಾಂಗ್ರೆಸ್ ಮುಖಂಡರೊಂದಗೆ ಸಭೆ ಸೇರಿ 49 ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ ಮೂರನೇ ಪಟ್ಟಿಯ ಕುರಿತೂ ಸಹ ಚುನಾವಣಾ ಪರಿಶೀಲನಾ ಸಮಿತಿ ಸಭೆ ಸಹ ಪೂರ್ಣಗೊಳಿಸಿದ್ದು, ಈ ಪಟ್ಟಿಗೆ ಸಂಬಂಧಪಟ್ಟಂತೆ ಬುಧವಾರ ಸಂಜೆ 4.30ಕ್ಕೆ ಸಭೆ ಎಐಸಿಸಿ ಕಚೇರಿಯಲ್ಲಿ ನಡೆಯಲಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ಎರಡು ಮತ್ತು ಮೂರನೇ ಪಟ್ಟಿ ಅಂತಿಮಗೊಳಿಸಿದ ಮೇಲೆಯೇ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ನಾಳೆ ಸಂಜೆ ನಡೆಯುವ ಸಭೆ ಮಹತ್ವ ಪಡೆದುಕೊಂಡಿದೆ.
ಈಗ ಸಿದ್ಧಪಡಿಸಲಾದ 49 ಜನರಲ್ಲಿ ಒಂದೇ ಹೆಸರು ಇರುವ ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದ್ದು, ನಾಳೆ ಒಂದಕ್ಕಿಂತ ಹೆಚ್ಚು ಹೆಸರು ಇರುವ ಕ್ಷೇತ್ರಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಪುಲಿಕೇಶಿನಗರದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ ಅವರಿಗೆ ಟಿಕೆಟ್ ನೀಡಿರುವುದಾಗಿ ಗೊತ್ತಾಗಿದೆ.
ರಾಯಚೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಗಳು ಎಂದು ಖಚಿತವಾಗಿಲ್ಲ. ಸಿಂಧನೂರಿನಿಂದ ಬಾದರ್ಲಿ ಹಂಪನಗೌಡ, ಮಾನ್ವಿಯಿಂದ ಬಿ.ವಿ. ನಾಯಕ್, ಲಿಂಗಸೂಗೂರಿನಿಂದ ಡಿ.ಎಸ್. ಹೂಲಿಗೇರಿ, ದೇವದುರ್ಗದಿಂದ ಶ್ರೀದೇವಿ ನಾಯಕ್ ಹೆಸರು ಅಂತಿಮಗೊಂಡಿವೆ ಎಂದು ಹೇಳಲಾಗುತ್ತಿದೆ ಯಾದರೂ ನಾಳೆ ಪುನಃ ನಡೆಯುವ ಎಐಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಗೊತ್ತಾಗಿದೆ.
ಬೀದರ್ ಜಿಲ್ಲೆಯ ಔರಾದ್ ಮೀಸಲು ಕ್ಷೇತ್ರದಿಂದ ಭೀಮಸೇನ್ ರಾವ್ ಸಿಂಧೆ ಅವರಿಗೆ ಟಿಕಟ್ ನೀಡುವಂತೆ ಈಶ್ವರ ಖಂಡ್ರೆ ಮತ್ತು ರಾಜಶೇಖರ ಪಾಟೀಲ್ ಒತ್ತಡ ಹಾಕಿದ್ದು, ಒಂದು ವೇಳೆ ಸಿಂಧೆ ಅವರಿಗೆ ಅಲ್ಲಿ ಟಿಕೆಟ್ ದೊರೆತಲ್ಲಿ, ಲಿಂಗಸೂಗೂರು ಕ್ಷೇತ್ರದಿಂದ ಡಿ.ಎಸ್. ಹೂಲಿಗೇರಿ ಅಭ್ಯರ್ಥಿ ಆಗುವ ಸಾಧ್ಯತೆ ಇದ್ದು, ಇದು ನಾಳೆ ಮತ್ತೊಮ್ಮೆ ನಡೆಯುವ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆ ಇದೆ.
ಮಾನ್ವಿ ವಿಧಾನಸಭಾ ಕ್ಷೇತ್ರದಿಂದ ಹಂಪಯ್ಯ ನಾಯಕ್ ಅವರ ಹೆಸರು ತೀವ್ರ ಪೈಪೋಟಿಯಲ್ಲಿದ್ದು, ಈ ಬಗ್ಗೆಯೂ ಸಹ ತೀರ್ಮಾನ ನಾಳೆ ಆಗಲಿದೆ ಎಂದು ಹೇಳಲಾಗುತ್ತಿದೆ.
ತೀವ್ರ ಕುತೂಹಲ ಕೆರಳಿಸಿರುವ ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಎನ್.ಎಸ್. ಬೋಸರಾಜ್ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಈ ಕ್ಷೇತ್ರದಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡಗಳು ಎಐಸಿಸಿಗೂ ಮುಟ್ಟಿದ್ದರಿಂದ ಇನ್ನೂ ಅಂತಿಮಗೊಂಡಿಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ 14-15 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕಾಗಿರುವುದರಿಂದ ಎಲ್ಲಿ ಅಲ್ಪಸಂಖ್ಯಾತರು ಗೆಲ್ಲುವ ಸಾಧ್ಯತೆ ಇದೆಯೋ ಅಲ್ಲಿ ಅವರಿಗೆ ನಿಶ್ಚಿತವಾಗಿ ಟಿಕೆಟ್ ನೀಡುವ ಲೆಕ್ಕಾಚಾರಗಳು ಎಐಸಿಸಿ ಮಟ್ಟದಲ್ಲಿ ಚರ್ಚೆ ನಡೆದಿವೆ ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ರಾಯಚೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಎನ್.ಎಸ್. ಬೋಸರಾಜ್ ಮತ್ತು ಅಲ್ಪಸಂಖ್ಯಾತರ ಮಧ್ಯೆ ಪೈಪೋಟಿ ಇದ್ದು, ಇದನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ನಿರ್ಧಾರಕ್ಕೆ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅಲ್ಪಸಂಖ್ಯಾತರಿಗೆ ನೀಡುವುದಾದರೆ ಅಸ್ಲಂ ಪಾಷಾ ಹೆಸರು ಇದೆ ಎಂದು ಗೊತ್ತಾಗಿದೆ.ಏನೇ ಆದರೂ ಹೈವೋಲ್ಟೇಜ್ ಕ್ಷೇತ್ರ ಎಂದು ಬಿಂಬಿತವಾದ ರಾಯಚೂರು ಕ್ಷೇತ್ರದ ಅಂತಿಮ ನಿರ್ಧಾರ ಎಐಸಿಸಿ ಅಂಗಳದಲ್ಲಿದೆ.
ಸಿಂಧನೂರಿನಿಂದ ಬಾದರ್ಲಿ ಹಂಪನಗೌಡರ ಜೊತೆಗೆ ಬಸನಗೌಡ ಬಾದರ್ಲಿ ಹೆಸರು ಸಹ ಪೈಪೋಟಿಯಲ್ಲಿದ್ದು, ಹಂಪನಗೌಡರ ಹೆಸರು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಯುವ ಕಾಂಗ್ರೆಸ್ ಕೋಟಾದಲ್ಲಿ ಬಸನಗೌಡ ಬಾದರ್ಲಿ ಅವರಿಗೆ ಟಿಕಟ್ ಕೊಡಿಸುವ ಯತ್ನ ನಡೆದಿದೆ. ಹೀಗಾಗಿ ನಾಳೆ ಸಂಜೆ 4.30ಕ್ಕೆ ನಡೆಯುವ ಎಐಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮನಿರ್ಧಾರವಾಗಲಿದೆ.
ಏತನ್ಮಧ್ಯೆ ಟಿಕೆಟ್ ಆಕಾಂಕ್ಷಿಗಳು ನವದೆಹಲಿಯಲ್ಲಿ ಬೀಡುಬಿಟ್ಟಿದ್ದು, ಟಿಕೆಟ್ಗಾಗಿ ಲಾಭಿ ನಡೆಸಿದ್ದಾರೆ. ಕಲಬುರ್ಗಿಯಿಂದ ಸುಲಪುಲ ಮಠದ ಸ್ವಾಮೀಜಿ ನೇತೃತ್ವದಲ್ಲಿ ನಿಯೋಗವೊಂದು ಇಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕೆಲವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಟಿಕೆಟ್ ಆಕಾಂಕ್ಷಿಗಳು ಜಮಾಯಿಸಿದ್ದು, ಟಿಕೆಟ್ಗಾಗಿ ಒತ್ತಡ ತಂದಿದ್ದಾರೆ.
ಈ ಎಲ್ಲಾ ಬೆಳವಣಿಗೆ ಮಧ್ಯೆ ಕಾಂಗ್ರೆಸ್ನ ಎರಡನೇ ಮತ್ತು ಮೂರನೇ ಪಟ್ಟಿ ಏ.6ರೊಳಗೆ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.