ತುಮಕೂರು, ಮಾ.28: ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ವಜಾ ಮಾಡಿರುವುದು ಬಿಜೆಪಿಯ ಅಸಂವಿಧಾನಿಕ ನಡೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಿಡಿಕಾರಿದೆ.
ಕ್ಷುಲ್ಲಕ ಕಾರಣಕ್ಕೆ ರಾಹುಲ್ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿರುವುದು ದೊಡ್ಡ ಷಡ್ಯಂತ್ರವಾಗಿದೆ. ಅವರು ಮಾಡಿರುವ ತಪ್ಪು ಏನೆಂಬುದನ್ನು ಬಿಜೆಪಿ ಹೇಳುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖಗೌಡ ಪತ್ರಿಕಾಗೋಷ್ಠಿಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಟೀಕೆ ಮಾಡುವುದು ತಪ್ಪಾ. ಟೀಕೆ ಮಾಡುವ ಧ್ವನಿ ಅಡಗಿಸುವ ಕೆಲಸ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಅವರು ಹರಿಹಾಯ್ದರು.
ಕೋಲಾರದಲ್ಲಿ ರಾಹುಲ್ಗಾಂಧಿಯವರು ಮೋದಿ ಹೆಸರಿನವರು ಕಳ್ಳರಿದ್ದಾರೆ ಎಂದು ಭಾಷಣದಲ್ಲಿ ಟೀಕೆ ಮಾಡಿದ್ದೇ ತಪ್ಪಾ. ಈ ರೀತಿ ಬಿಜೆಪಿಯವರು ಎಷ್ಟು ಟೀಕೆ ಮಾಡಿಲ್ಲ. ಅವರಿಗೊಂದು ಕಾನೂನು, ನಮಗೊಂದು ಕಾನೂನಾ ಎಂದು ಅವರು ಪ್ರಶ್ನಿಸಿದರು.
ಲೋಕಸಭೆಯಲ್ಲಿ ರಾಹುಲ್ಗಾಂಧಿಯವರು ಅದಾನಿ ಗ್ರೂಪ್ನ ಹಗರಣಗಳ ಬಗ್ಗೆ ಪ್ರಸ್ತಾಪಿಸಲು ಆರಂಭಿಸಿದಾಗಲೇ ಹೆದರಿದ ಪ್ರಧಾನಿಗಳು ಈ ರೀತಿ ರಾಹುಲ್ಗಾಂಧಿಯವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ವಸತಿಗೃಹ ಬಿಡುವಂತೆಯೂ ನೋಟಿಸ್ ಕೊಟ್ಟಿದ್ದಾರೆ ಎಂದರು.
ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಹಲವು ಹಂತದಲ್ಲಿ ಅಧಿಕಾರ ಅನುಭವಿಸಿ ಈಗ ಪಕ್ಷ ಬಿಟ್ಟ ಮೇಲೆ ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆಯೇ ಮಾತನಾಡುವುದು, ಸುಳ್ಳು ಆರೋಪ ಮಾಡುವುದು ಅವರ ಘನತೆಗೆ ಶೋಭ ತರುವುದಿಲ್ಲ ಎಂದರು.
ಅನಾವಶ್ಯಕವಾಗಿ ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುವುದು ಸರಿಯಲ್ಲ. 2014 ರಲ್ಲಿ ತೋಟದ ಮನೆಯಲ್ಲಿದ್ದವರನ್ನು ಕೈ ಹಿಡಿದು ಕರೆ ತಂದು ಸಂಸದರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ಗಾಂಧಿಯವರು ಎಂಬುದನ್ನು ಅವರು ಮರೆಯಬಾರದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್, ರೆಡ್ಡಿಚಿನ್ನಯಲ್ಲಪ್ಪ, ಕೆಂಚಮಾರಯ್ಯ, ನರಸಿಂಹಯ್ಯ, ಶಿವಾಜಿ, ಮಂಜುನಾಥ್, ವಾಲೆಚಂದ್ರಯ್ಯ ಶ್ರೀನಿವಾಸ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.