ಸುದ್ದಿಮೂಲ ವಾರ್ತೆ
ಹೊಸಕೋಟೆ, ಜೂನ್ 10 : ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸುಳ್ಳು ಆಶ್ವಾಸನೆ ಹಾಗೂ ಬಿಜೆಪಿ ಪಕ್ಷದ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಬಿಜೆಪಿ ಪಕ್ಷದ ಅಧಿಕಾರ ಕಸಿದುಕೊಂಡಿದೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ನಗರದ ಕನಕಭವನದಲ್ಲಿ ಅಯೋಜನೆ ಮಾಡಲಾಗಿದ್ದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಪಕ್ಷ ಚುನವಣೆ ಸಂಧರ್ಭದಲ್ಲಿ ತೆಗೆದುಕೊಂಡ ಮೀಸಲಾತಿ ನಿರ್ಧಾರ ಸಾಕಷ್ಟು ಪೆಟ್ಟುಕೊಟ್ಟಿತು. ಒಂದಿಷ್ಟು ಸಮುದಾಯಕ್ಕೆ ಒಳಿತಾದರೂ ಸಹ ಬಂಜಾರ, ಲಂಬಾಣಿಯಂತಹ
ಹಲವಾರು ಸಣ್ಣ ಸಮುದಾಯಗಳು ಪಕ್ಷಕ್ಕೆ ಮತ ನೀಡಿಲ್ಲ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಮೇಲೆ ಗಂಭೀರವಾಗಿ ಮಾಡಿದ ಆರೋಪಕ್ಕೆ, ಕೌಂಟರ್ ಕೊಡಲು ನಮ್ಮ ಪಕ್ಷ ಸಂಪೂರ್ಣ ವಿಫಲವಾಯಿತು. ಪ್ರಮುಖವಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಗ್ಯಾರಂಟಿ ಕಾರ್ಡ್ ಗಳನ್ನು ಹಂಚಿಕೆ ಮಾಡುತ್ತಿದ್ದರೂ ಸಹ ನಮ್ಮ ಪಕ್ಷ ಚುನಾವಣೆಗೆ ಕೇವಲ 8 ದಿನ ಇದ್ದಾಗ ಮಾತ್ರ
ಪ್ರಣಾಳಿಕೆ ಘೋಷಣೆ ಮಾಡಿದ್ದು ಸೋಲಿಗೆ ಕಾರಣವಾಯಿತು ಎಂದು ಆತ್ಮಾವಲೋಕನ ಮಾಡಿಕೊಂಡರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ಟೌನ್ ಅಧ್ಯಕ್ಷ ಡಾ.ಸಿ.ಜಯರಾಜ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಕ್ಷೇತ್ರಕ್ಕೆ ಬಂದಾಗಿನಿಂದ ನಾನು ಸರ್ವಧರ್ಮದ ಅಬಿವೃದ್ದಿ ದೃಷ್ಟಿಯಿಂದ ಕೆಲಸ
ಮಾಡಿದ್ದೆ. ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯ ವಾಸವಿರುವ ಗ್ರಾಮಗಳಾದ
ಕಟ್ಟಿಗೇನಹಳ್ಳಿ, ಬೈಲನರಸಾಪುರ, ಹಿಂಡಿಗನಾಳ, ಮೇಡಿ ಮಲ್ಲಸಂದ್ರ ಗ್ರಾಮಗಳಲ್ಲಿ ಸಾಕಷ್ಟು ಅಬಿವೃದ್ದಿ ಮಾಡಿದ್ದೆ. ಆದರೂ ಕೇವಲ ಶೇ10ಷ್ಟು ಮತ ಬಂದಿದೆ. ಚುನಾವಣೆ ಸಂಧರ್ಭದಲ್ಲಿ ನಮ್ಮ ಬಳಿ ಹಣ,
ಉಡುಗೊರೆ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಖುರಾನ್, ಅಲ್ಲಾ ಮೇಲೆ ಪ್ರಮಾಣ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೀರಿ. ಮೂರು ಭಾರಿ ಪ್ರಾರ್ಥನೆ ಮಾಡುವ ನಿಮಗೆ ಅಲ್ಲಾ
ಕ್ಷಮಿಸುವುದಿಲ್ಲ ಎಂದು ಅಲ್ಪಸಂಖ್ಯಾತರ ವಿರುದ್ದ ಎಂಟಿಬಿ ನಾಗರಾಜ್ ಅಸಮಾಧಾನ ಹೊರಹಾಕಿದರು.
ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ :
ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಮೆಚ್ಚಿದ ಏಕೈಕ ವ್ಯಕ್ತಿ. ಇಂತಹ ನಾಯಕನನ್ನು ಕಟ್ಟಿಹಾಕಲು 19 ಪಕ್ಷಗಳು ಒಟ್ಟಾಗಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ಸಜ್ಜಾಗುತ್ತಿವೆ. ರಾಜ್ಯದಲ್ಲಿ ಎರಡು ಪಕ್ಷಗಳು ಸೇರಿ ಮಾಡಿದ ಅಧಿಕಾರವೇ ಉಳಿದಿಲ್ಲ. ಇನ್ನು 19 ಪಕ್ಷಗಳು ಒಟ್ಟಾಗಿ ಮಾಡುವ ಅಧಿಕಾರ ಉಳಿಯಲು ಸಾಧ್ಯವೆ. ಹಲವಾರು ದೇಶಗಳಲ್ಲಿ ಆರ್ಥಿಕ ಸ್ಥಿತಿಗತಿ ಬುಡಮೇಲಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಭಾರತ ದೇಶದ ಜಿಡಿಪಿ ಏರಿಕೆ ಆಗುತ್ತಿದ್ದು, ಆರ್ಥಿಕ ಪರಿಸ್ಥಿತಿಯಲ್ಲಿ
ಸ್ಥಿರತೆಯನ್ನು ಕಾಯ್ದುಕೊಂಡಿದೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.
ಹೊಸಕೋಟೆ ನಗರದ ಕನಕಭವನದಲ್ಲಿ ನಡೆದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮಾತನಾಡಿದರು.