ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.9: ರಾಜ್ಯ ವಿಧಾನಸಭಾ ಚುನಾಚಣೆಗೆ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡುವ ಸಂಬಂಧ ದೆಹಲಿಯಲ್ಲಿ ಭಾನುವಾರವೂ ಬಿರುಸಿನ ಚಟುವಟಿಕೆಗಳು ನಡೆದವು.
ಮೊದಲ ಪಟ್ಟಿಯಲ್ಲಿ 120 ಕ್ಷೇತ್ರಗಳಿಗೆ ಮತ್ತು ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಈಗ ಬಾಕಿ ಇರುವ 58 ಕ್ಷೇತ್ರಗಳಿಗೆ ಮೂರನೇ ಪಟ್ಟಿ ಬಿಡುಗಡೆ ಮಾಡುವ ಸಂಬಂಧ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸುಧೀರ್ಘ ಚರ್ಚೆ ಮಾಡಿದ್ದಾರೆ.
ಎರಡನೇ ಪಟ್ಟಿ ಬಿಡುಗಡೆ ಬಳಿಕ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಪಕ್ಷದ ನಾಯಕರುಗಳ ವಿರುದ್ಧ ಕೆಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ರಘು ಆಚಾರ್ ಜೆಡಿಎಸ್ ಸೇರುವುದಾಗಿ ಹೇಳಿದ್ದರೆ, ನಾಗರಾಜ್ ಛಬ್ಬಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಭಿನ್ನಮತ ಕಡಿಮೆ ಮಾಡುವ ಉದ್ದೇಶದಿಂದ ಮೂರನೇ ಪಟ್ಟಿಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಬೆಳಗಾವಿಯ 18 ಕ್ಷೇತ್ರಗಳ ಪೈಕಿ ಅಥಣಿ, ರಾಯಭಾಗ, ಬೆಳಗಾವಿ ಉತ್ತರ ಸಹಿತ ಐದು ಕ್ಷೇತ್ರಗಳಿಗೆ ಹಗ್ಗ ಜಗ್ಗಾಟ ನಡೆದಿದೆ. ಬಾಗಲಕೋಟೆಯ ಏಳು ಕ್ಷೇತ್ರಗಳ ಪೈಕಿ ತೇರಳಾದ ಕ್ಷೇತ್ರಕ್ಕೆ ಉಮಾಶ್ರೀ ಹೆಸರು ಅಂತಿಮಗೊಳಿಸುವ ಬಗ್ಗೆ ತಕರಾರು ಎದ್ದಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಎಸ್.ಆರ್. ಪಾಟೀಲ್ ತೀವ್ರ ಪೈಪೋಟಿ ನಡೆಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಸಚಿವ ಪ್ರಭು ಚೌಹಾಣ್ ಪ್ರತಿನಿಧಿಸುವ ಔರಾದ್, ಕಲಬುರ್ಗಿಯ ಗ್ರಾಮೀಣ ಮೀಸಲು ಕ್ಷೇತ್ರ ಬಾಕಿ ಉಳಿದಿವೆ.
ರಾಯಚೂರು ಜಿಲ್ಲೆಯ ರಾಯಚೂರು ನಗರ, ಮಾನ್ವಿ, ಸಿಂಧನೂರು ಮತ್ತು ಲಿಂಗಸೂಗೂರು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಆಕಾಂಕ್ಷಿಗಳು ಕಾಯುತ್ತಿದ್ದಾರೆ.
ಇನ್ನು ಬೆಂಗಳೂರಿನಲ್ಲಿಯೂ ಸಹ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಆರ್.ವಿ. ದೇವರಾಜ್ ಮತ್ತು ಮಾಜಿ ಮೇಯರ್ ಗಂಗಾಂಬಿಕೆ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮತ್ತೊಂದೆಡೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆಜಿಎಫ್ ಬಾಬು ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಜೆಡಿಎಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ.
ಈ ಮಧ್ಯೆ ಬಿಜೆಪಿ ಮೊದಲ ಪಟ್ಟಿ ಅಂತಿಮವಾಗಿದ್ದು, ಸೋಮವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಪಟ್ಟಿ ಬಂದ ಬಳಿಕವೇ ಕಾಂಗ್ರೆಸ್ ಬುಧವಾರ (ಏ.12) ತನ್ನ ಮೂರನೇ ಪಟ್ಟಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ.