ಬೆಂಗಳೂರು, ಮೇ 13: ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸಾಮೂಹಿಕ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇಶದ ಅತ್ಯಂತ ಹಳೆಯ ಪಕ್ಷ ಸ್ಪಷ್ಟ ಬಹುಮತ ಪಡೆದಿದೆ. ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಬಗ್ಗೆ ಒಮ್ಮತದ ನಿರ್ಧಾರದ ಮೂಲಕ ಪಕ್ಷವು ಆಯ್ಕೆ ಮಾಡಲಿದೆ ಎಂದು ಹೇಳಿದರು.
ಎಲ್ಲಾ ಸಮುದಾಯದ ಜನರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಚುನಾವಣಾ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಕ್ಷ ಶ್ರಮಿಸಲಿದೆ ಎಂದರು.
ಕಾಂಗ್ರೆಸ್ಗೆ ಭಾರೀ ಜನಾದೇಶ ನೀಡಿದ್ದಕ್ಕಾಗಿ ಕರ್ನಾಟಕದ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ನಾವು ಜನಾದೇಶವನ್ನು ಗೌರವಿಸುತ್ತೇವೆ ಮತ್ತು ನಮ್ಮ ಮೇಲಿನ ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ನಾವು ಘೋಷಿಸಿದ ಎಲ್ಲಾ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತೇವೆ. ನಾನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಧನ್ಯವಾದ ಹೇಳುತ್ತೇನೆ. ಸೋನಿಯಾ ಗಾಂಧಿ ಅವರ ಆರೋಗ್ಯ ಚೆನ್ನಾಗಿಲ್ಲದಿದ್ದರೂ ಪ್ರಚಾರ ಮಾಡಿದ್ದರು ಎಂದು ಖರ್ಗೆ ಹೇಳಿದರು.