ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ನ.28: ಜಗತ್ತಿನಲ್ಲಿಯೇ ಅತಿದೊಡ್ಡ ಸಂವಿಧಾನ ಎಂದು ಕರೆಸಿಕೊಳ್ಳುವ ನಮ್ಮ ಭಾರತದ ಸಂವಿಧಾನವನ್ನು ಗೌರವಿಸಿ ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮುನಿರಾಜು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಸಂಜೀವಿನಿ ಭವನದಲ್ಲಿ ತಾಲೂಕು ಮಟ್ಟದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಸಂವಿಧಾನದ ಘನತೆಯನ್ನು ಇದರ ಶಕ್ತಿಯನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಕೊಡಬೇಕು, ಸಂವಿಧಾನದ ಆದರ್ಶಗಳನ್ನು, ಉದಾತ್ತ ಭಾವನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡಬೇಕು.
ನಮ್ಮ ಸಂವಿಧಾನದ ಘನತೆ ಹೇಗಿದೆ ಎಂದರೆ ನೆರೆ ದೇಶಗಳು ಅಲ್ಲಿನ ಸಂವಿಧಾನವನ್ನು ಅಳವಡಿಸಿಕೊಂಡು ಕೆಲವೇ ವರ್ಷಗಳಲ್ಲಿ ಅಲ್ಲಿನ ಸಂವಿಧಾನವನ್ನು ಉಲ್ಲಂಘನೆ ಮಾಡಿರುವ ಉದಾಹರಣೆಗಳಿವೆ. ಆದರೆ, ಭಾರತೀಯ ಸಂವಿಧಾನವು ಹೇಗಿದೆ ಎಂದರೆ ನಮಗೆ ಸ್ವತಂತ್ರ ಬಂದು 77 ವರ್ಷ ಕಳೆದರೂ ಇಲ್ಲಿಯವರೆಗೂ ಭಾರತದ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಪ್ರಜೆಯೂ ಕೂಡ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದ್ದರಿಂದ ಎಲ್ಲರೂ ಬದುಕಲು ಹಕ್ಕನ್ನು ಕೊಟ್ಟಂತಹ ನಮ್ಮ ಭಾರತೀಯ ಸಂವಿಧಾನ ವಿಶೇಷವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷರಾದ ಎಮ್ ಕೆ ರಾಜಶೇಖರ್ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯಮ್ಮ , ಪಿಡಿಒ ಶೈಲಾ, ಕಾರ್ಯದರ್ಶಿ ರಾಜಣ್ಣ, ಕರವಸೂಲಿಗಾರ ಸುರೇಶ್, ಸಂಪನ್ಮೂಲ ವ್ಯಕ್ತಿ ಪ್ರವೀಣ್, ಎನ್ ಆರ್ ಎಲ್ ಎಂ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿ ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು.