ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಸೆ.12: ಸಮಾಜದಲ್ಲಿ ನಡೆಯುವ ದೌರ್ಜನ್ಯ, ದಬ್ಬಾಳಿಕೆ ಮತ್ತು ಅನ್ಯಾಯಗಳನ್ನು ತಡೆಗಟ್ಟಲು ಸಂವಿಧಾನ ಪ್ರಬಲ ಅಸ್ತ್ರವಾಗಿದ್ದು ವಿದ್ಯಾರ್ಥಿಗಳು ಮತ್ತು ಯುವಕರು ಸಂವಿಧಾನವನ್ನು ಅಧ್ಯಯನ ಮಾಡಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿ ವೆಂಕಟೇಶ್ ಸಲಹೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂನಲ್ಲಿ ಕಾಲೇಜಿನ ಐಕ್ಯೂಎಸಿ ಸಹಯೋಗದಲ್ಲಿ ಇತಿಹಾಸ ವಿಭಾಗ ಮತ್ತು ಪರಂಪರೆ ಕೂಟ ಹಾಗೂ ಪತ್ರಾಗಾರ ಕೂಟ ವತಿಯಿಂದ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನಲ್ಲಿ ಶ್ರೇಷ್ಠ ಸಂವಿಧಾನವನ್ನು ರಚಿಸಿದರು. ವಿದ್ಯಾರ್ಥಿಗಳು ಮತ್ತು ಯುವಕರು ಸಂವಿಧಾನವನ್ನು ಅಧ್ಯಯನ ಮಾಡಿ ಸಾಮಾಜಿಕ ನ್ಯಾಯ ಪಡೆದುಕೊಳ್ಳುವ ಜೊತೆಗೆ ಯಾರಿಗಾದರೂ ಅನ್ಯಾಯ ಆಗುತ್ತಿದ್ದರೆ ಸಂವಿಧಾನದ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಮಾಡಬೇಕೆಂದು ಸಲಹೆ ಮಾಡಿದರು.
ಇತಿಹಾಸ ಸಹಪ್ರಾಧ್ಯಾಪಕರು ಹಾಗೂ ಪರಂಪರೆ ಕೂಟ ಪತ್ರಾಗಾರ ಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಿತಿಯ ಸಂಚಾಲಕ ಡಾ.ಷಫೀ ಅಹಮದ್ ಮಾತನಾಡಿ, ಪತ್ರಗಾರ ಕೂಟದ ಅವಶ್ಯಕತೆಯಿದೆ ಪತ್ರಗಾರ ಇಲಾಖೆಯ ದಾಖಲೆಗಳ ಬಳಕೆ ಮತ್ತು ಸಂರಕ್ಷಣೆ ಮತ್ತು ಅವುಗಳ ಮಹತ್ವದ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎನ್ ಮಹೇಶ್ ಮಾತನಾಡಿ ಪತ್ರಾಗಾರ ಇಲಾಖೆಯ ದಾಖಲೆಯ ಮಹತ್ವದ ಕುರಿತು ಮಾತನಾಡಿ ದಾಖಲೆಗಳ ವರ್ಗೀಕರಣ ಬ್ರಿಟೀಷರ ಕಾಲದ ಮತ್ತು ಮೈಸೂರಿನ ಒಡೆಯರ್ ಕಾಲದ ದಾಖಲೆಗಳು ಹಾಗೂ ಇತ್ತೀಚಿನ ದಾಖಲೆಗಳು ಅವುಗಳನ್ನು ಹೇಗೆ ಬಳಸಿಬೇಕು ಡಿಜಿಟಲ್ ಮಾಧ್ಯಮದ ಮೂಲಕ ಹೇಗೆ ದಾಖಲೆಗಳನ್ನು ವೀಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿ ಜೊತೆಗೆ ಈ ವಿಚಾರದ ಸಂಶೋಧನೆ ಮಾಡಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಉಮೇಶ್ರೆಡ್ಡಿ, ಗ್ರಂಥಪಾಲಕ ಅಂಜಪ್ಪರೆಡ್ಡಿ, ಉಪನ್ಯಾಸಕರಾದ ಹರೀಶ್, ಗಂಗಾಧರ್, ಜಿ.ಎಂ.ವೆಂಕಟೇಶ್, ರವಿಕುಮಾರ್, ಸಾದತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.