ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.3: ಬಿಜೆಪಿಯ ಪ್ರಣಾಳಿಕೆ ಸಮಾಜದ ಪ್ರತಿ ವಲಯದ ಜನರ ಆಶೋತ್ತರಗಳು, ಅಭಿಲಾಷೆಗಳಂತೆ ಸಿದ್ಧವಾಗಲಿದೆ. ಕೇವಲ ಮತಗಳಿಕೆಯ ಉದ್ದೇಶಕ್ಕಾಗಿ ಸುಳ್ಳು, ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಹೋಟೆಲ್ ಅಸೋಸಿಯೇಷನ್ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ಮಾತನಾಡಿದ ಸಚಿವರು, ಸಮಾಜದ ಎಲ್ಲಾ ವರ್ಗದವರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಪಡೆದು ಪ್ರಣಾಳಿಕೆ ರೂಪಿಸಲಾಗುತ್ತಿದೆ. ಚುನಾವಣೆ ಬಳಿಕ ಸರ್ಕಾರ ರಚನೆ ಮಾಡಿದಾಗ ಮುಂದಿನ 5 ವರ್ಷಗಳಲ್ಲಿ ಏನೆಲ್ಲಾ ಅನುಷ್ಠಾನಕ್ಕೆ ತರಬೇಕು, ಅದು ಕಾರ್ಯಸಾಧುವೇ ಅನ್ನುವುದನ್ನು ಗಮನಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದರು.
ಬೇರೆ ಪಕ್ಷ 1, 2, 3 ಗ್ಯಾರೆಂಟಿ ಎಂದು ಏಜೆನ್ಸಿಯವರು ಬರೆದುಕೊಟ್ಟಿದ್ದನ್ನು ಘೋಷಿಸುತ್ತಿದೆ. ಯೋಜನೆಗಳ ಆರ್ಥಿಕ ನೆಲೆಗಟ್ಟು ನೋಡದೆ, ಅನುಷ್ಠಾನ ಸಾಧ್ಯವೇ ಇಲ್ಲವೇ ಎಂಬ ಬಗ್ಗೆ ವಿಮರ್ಶೆ ನಡೆಸದೆ ಘೋಷಣೆಗಳ ಮೇಲೆ ಘೋಷಣೆ ಮಾಡಿದೆ. ಆದರೆ ಇದು ಕೇವಲ ಮತ ಕೀಳಲು ಆಕರ್ಷಕ ಪ್ರಣಾಳಿಕೆ ಮಾಡುವ ಪ್ರಯತ್ನ. ಇದರಿಂದ ರಾಜ್ಯದ ಅಭಿವೃದ್ಧಿ ಹಾಗೂ ಆ ಭರವಸೆಗಳ ಅನುಷ್ಠಾನ ಸಾಧ್ಯವಿಲ್ಲ. ಮತ್ತೊಂದು ಪಕ್ಷ ರಾಜ್ಯದಲ್ಲಿ ಈಗಾಗಲೇ ಯಾತ್ರೆ ಮಾಡಿ ಒಂದೊಂದು ಗ್ರಾಮ ಪಂಚಾಯಿತಿಗೆ ಹೈಟೆಕ್ ಆಸ್ಪತ್ರೆ ನೀಡುವ ಭರವಸೆ ನೀಡಿದೆ. ಆದರೆ 45-46 ಹೊಸ ತಾಲೂಕುಗಳಾಗಿ ಅನೇಕ ವರ್ಷವಾಗಿದೆ. ಇಲ್ಲಿಯವರೆಗೆ ಆ ತಾಲೂಕಿಗೆ ಆಸ್ಪತ್ರೆ ಮಾಡಲು ಆಗಿಲ್ಲ. ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹೋಗಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಮಾಡಲು ಸಾಧ್ಯವೇ ಎಂಬುದನ್ನು ಯೋಚನೆ ಮಾಡದೆ ಮತ ಗಳಿಕೆಯ ತಂತ್ರ ಮಾಡುತ್ತಿದೆ ಎಂದರು.
ಬಿಜೆಪಿಯ ಪ್ರಣಾಳಿಕೆ ಸುಳ್ಳಿನ ಕಂತೆ ಅಲ್ಲ. ಹೀಗಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡಲಾಗುತ್ತಿದೆ. ಸೇವಾ ವಲಯದಲ್ಲಿ ಸೃಷ್ಟಿಯಾಗುವಷ್ಟು ಉದ್ಯೋಗ ಬೇರೆಲ್ಲೂ ಆಗುವುದಿಲ್ಲ. ಹೀಗಾಗಿ ಹೊಟೇಲ್ ಉದ್ಯಮಿಗಳ ಜೊತೆ ಮೊದಲ ಸಂವಾದ ನಡೆಯುತ್ತಿದೆ. ಮುಂದಿನ ದಿನ ಹೊಟೇಲ್ ಕೆಲಸಗಾರರ ಬಳಿಯೂ ಸಲಹೆ ಪಡೆಯಲಾಗುವುದು. ಎಲ್ಲಾ ತರಹದ ಶಿಕ್ಷಣ ಇರುವವರಿಗೆ ಉದ್ಯೋಗ ನೀಡುವ ಉದ್ಯಮ ಇದಾಗಿದೆ ಎಂದರು.
ಲೈಸೆನ್ಸ್ ನೀಡಲು ಹೊಸ ಕ್ರಮದ ಪ್ರಯತ್ನ
ಇಡೀ ದೇಶದಲ್ಲಿ ಬ್ರೇಕ್ ಫಾಸ್ಟ್ ಪರಂಪರೆ ಆರಂಭವಾಗಿದ್ದು ಉಡುಪಿಯಿಂದ. ಎಲ್ಲಾ ನಗರಗಳಲ್ಲೂ ಸಾವಿರಾರು ದರ್ಶಿನಿಗಳು ಇವೆ. ಕೋವಿಡ್ ಸಮಯದಲ್ಲಿ ದೊಡ್ಡ ಹೊಡೆತ ತಿಂದ ಉದ್ಯಮ ಹೊಟೇಲ್ ಉದ್ಯಮ. ಆದರೂ ಉಚಿತವಾಗಿ ಹಲವಾರು ಜನರ ಹೊಟ್ಟೆ ತುಂಬಿಸಿ ದೊಡ್ಡ ಕಾರ್ಯವನ್ನು ಮಾಡಿದೆ. ಹೀಗಾಗಿ ಈ ಉದ್ಯಮ ವಲಯ ಕೊಟ್ಟಿರುವ ಸಲಹೆಗಳು ಅತ್ಯಮೂಲ್ಯ. ಹೋಟೆಲ್ಗಳಿಗೆ ಪಾರದರ್ಶಕತೆಯಿಂದ ಲೈಸನ್ಸ್ ಕೊಡುವ ಕೆಲಸ ನಡೆಯಲಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಅದಕ್ಕಾಗಿ ಒಂದು ಕೇಂದ್ರೀಕೃತ ವ್ಯವಸ್ಥೆ ಅಥವಾ ಏಕಗವಾಕ್ಷಿ ಪರವಾನಿಗೆ ಕೊಡಲು ಸಾಧ್ಯವಿದೆಯಾ ಅನ್ನುವುದನ್ನು ಪ್ರಣಾಳಿಕೆ ಸಮಿತಿ ಚರ್ಚಿಸಿ ಅದನ್ನು ಜಾರಿ ಮಾಡುವ ಬಗ್ಗೆ ಚಿಂತಿಸಲಿದೆ ಎಂದರು.
ಕೇಂದ್ರದ ಮೋದಿ ಸರ್ಕಾರ ಹೊಟೇಲ್ ಉದ್ಯಮಿಗಳ ಪರವಾಗಿದೆ. ಜಿಎಸ್ಟಿಯನ್ನು 18% ನಿಂದ 5% ಗೆ ಇಳಿಸಲಾಗಿದೆ. ಗ್ಯಾಸ್, ಕಚ್ಚಾ ತೈಲದ ದರ ಕಡಿಮೆ ಮಾಡುವ ಬಗ್ಗೆ ಈ ವಲಯದಿಂದ ಸಲಹೆ ಬಂದಿದೆ. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಭಾರತಕ್ಕೆ ಹೊಡೆತ ಬಿದ್ದಿದೆ. ಆದರೂ ಅಮೆರಿಕದ ಒತ್ತಡಕ್ಕೆ ಬಗ್ಗದೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣದಿಂದ ಐರೋಪ್ಯ ದೇಶಗಳು, ಪಾಕ್, ಬಾಂಗ್ಲಾಗಳಿಗಿಂತ ಇಲ್ಲಿ ದರ ಕಡಿಮೆ ಇದೆ ಎಂದರು.
ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ಕೋವಿಡ್ ಲಾಕ್ಡೌನ್ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಿತ್ತು. ಆದಾಯ ಕಡಿಮೆ ಇದ್ದರೂ ಸರ್ಕಾರಿ ನೌಕರರಿಗೆ ಒಂದು ರೂಪಾಯಿ ವೇತನ ಕಡಿಮೆ ಮಾಡದ ದೇಶದ ಏಕಮಾತ್ರ ರಾಜ್ಯ ಕರ್ನಾಟಕವಾಗಿದೆ. ಅತಿವೃಷ್ಠಿ ಸಮಸ್ಯೆ ಎಡಬಿಡದೆ ಕಾಡಿದರೂ ಅನೇಕ ಸವಾಲುಗಳ ಮಧ್ಯೆ ಕರ್ನಾಟಕ ಭಾರತದಲ್ಲೇ ಅತಿ ಹೆಚ್ಚು ಜಿಎಸ್ಟಿ ಸಂಗ್ರಹಿಸಿ ಭಾರತದಲ್ಲಿ ನಂಬರ್ 2 ರಾಜ್ಯವಾಗಿದೆ. ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸುವುದು ನಿಜವಾದ ಗೆಲುವು. ಮುಂದಿನ ಬಾರಿಯೂ ಬಿಜೆಪಿಗೆ ಮತ ನೀಡಿ ಅಭಿವೃದ್ಧಿ ಕಾರ್ಯ ಮಾಡಲು ಆಶೀರ್ವಾದ ಮಾಡಿ ಎಂದು ಕೋರಿದರು.
ಸಂಸದ ಪಿ.ಸಿ. ಮೋಹನ್ , ಹೋಟೆಲ್ ಅಸೋಸಿಯೇಷನ್ ಪದಾಧಿಕಾರಿಗಳು, ಎಫ್ ಕೆಸಿಸಿಐ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.