ಸುದ್ದಿಮೂಲ ವಾರ್ತೆ
ತುಮಕೂರು, ಅ.26 : ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ಆಗುವ ಅನಾನುಕೂಲಗಳನ್ನು ಸರಿಪಡಿಸಿ ನೀರಾವರಿ ಪಂಪ್ಸೆಟ್ಗಳಿಗೆ ನಿರಂತರ 5 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಸಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಬೆಂಗಳೂರು ಪ್ರಸರಣ ವಲಯದ ಮುಖ್ಯ ಇಂಜಿನಿಯರ್ ಹಾಗೂ ನೋಡಲ್ ಅಧಿಕಾರಿಗಳಾದ ಮಂಜುನಾಥ್ ಹೇಳಿದರು.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವತಿಯಿಂದ ನಗರದ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಇಂತಹ ಸಂದರ್ಭದಲ್ಲೂ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಮರ್ಪಕ ವಿದ್ಯುತ್ ಪೂರೈಸಲಾಗುತ್ತಿದೆ. ರೈತರು ಅಗತ್ಯವಿದ್ದ ಸಂದರ್ಭದಲ್ಲಿ ನಮ್ಮ
ಇಲಾಖೆಯ ಕಚೇರಿಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ವಿವರಿಸಿ ಸಲಹೆ ನೀಡಬಹುದಾಗಿದೆ. ಮುಂದೆ ತಾಲ್ಲೂಕು ಮಟ್ಟದಲ್ಲೂ ಕೂಡ ರೈತರ ಸಭೆಗಳನ್ನು ಏರ್ಪಡಿಸಲಾಗುವುದು, ರೈತರ
ಸಮಸ್ಯೆಗಳು, ಸಲಹೆ ಹಾಗೂ ಅಭಿಪ್ರಾಯಗಳನ್ನು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ತುಮಕೂರು ಅಧೀಕ್ಷಕ ಇಂಜಿನಿಯರ್ ಲೋಕೇಶ್ ಮಾತನಾಡಿ, ಜಿಲ್ಲೆಯು 1220 ಫೀಡರ್ 107 ವಿದ್ಯುತ್ ಕೇಂದ್ರಗಳು ಹೊಂದಿದ್ದು, 1 ದಿನಕ್ಕೆ ರಾಜ್ಯದಲ್ಲಿ 15550 ಮೆ.ವ್ಯಾಟ್ ಹಾಗೂ ಜಿಲ್ಲೆಗೆ ಅಂದಾಜು 876 ಮೆ.ವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ. ಮಳೆ ಅಭಾವದಿಂದ ರಾಜ್ಯದ ಜಲಾಶಯಗಳಲ್ಲಿ ಶೇ.40ರಷ್ಟು ನೀರು ಸಂಗ್ರಹವಾಗಿದ್ದು, ಸೋಲಾರ್ ಸೇರಿದಂತೆ ಇತರೆ ಮೂಲಗಳಿಂದ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲೂ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮವಹಿಸಿ ಪರಿಸ್ಥಿತಿ ಸುಧಾರಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ, ರಾಜ್ಯದಲ್ಲಿಯೇ ಜಿಲ್ಲೆಯು ಅತಿ ಹೆಚ್ಚು ಕೊಳವೆಬಾವಿಗಳನ್ನು ಒಳಗೊಂಡಿದ್ದು, ಜಿಲ್ಲೆಯು ಸುಮಾರು 2010 ಕೆರೆಗಳನ್ನು ಹೊಂದಿದ್ದು, ಮಳೆ ಅಭಾವದಿಂದ ಅವು ಭರ್ತಿಯಾಗಿರುವುದಿಲ್ಲ. ಹೀಗಾಗಿ ರೈತರು ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದಾರೆ. ಗುಬ್ಬಿ ಹಾಗೂ ಶಿರಾ ತಾಲ್ಲೂಕಿನಲ್ಲಿ ವಿಭಾಗೀಯ ಕಚೇರಿಗಳನ್ನು ತೆರೆದು ಜಿಲ್ಲೆಯಲ್ಲಿ ಓವರ್ ಲೋಡಿಂಗ್ ಸಮಸ್ಯೆ ಬಗೆಹರಿಸಿ, ಉಪಸ್ಥಾವರಗಳ ಸಂಖ್ಯೆ ಹೆಚ್ಚಿಸಿ ಗುಣಮಟ್ಟದ ವಿದ್ಯುತ್ ನೀಡಬೇಕು. ವಿದ್ಯುತ್ ಮಾರ್ಗಗಳಿಂದ ರೈತರಿಗೆ ಆಗುವ ಹಾನಿಗಳನ್ನು ನಿವಾರಿಸಿ, ಸುಟ್ಟುಹೋದ ಟಿಸಿಗಳನ್ನು ತ್ವರಿತವಾಗಿ ಬದಲಾಯಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ತುಮಕೂರು ತಾಲ್ಲೂಕು ರಾಜ್ಯ ರೈತ ಸಂಘದ ಅಧ್ಯಕ್ಷ ಚಿಕ್ಕತಿಮ್ಮೇಗೌಡ ಮಾತನಾಡಿ, ಅಧಿಕಾರಿಗಳ ಪದೇಪದೇ ವರ್ಗಾವಣೆಯಿಂದ ಸಮಸ್ಯೆಗಳು ನಿವಾರಣೆಯಾಗುತ್ತಿಲ್ಲ. ತಾಲ್ಲೂಕಿನಲ್ಲಿ ಲೈನ್ಮ್ಯಾನ್ಗಳ ಕೊರತೆಯೂ ಇದೆ. ಹೆಬ್ಬೂರು, ಸಿಎಸ್ ಪುರ ಸೇರಿದಂತೆ ಹಲವೆಡೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಚಿಕ್ಕಣ್ಣಸ್ವಾಮಿ ದೇವಸ್ಥಾನದ ಬಳಿಯ ವಿದ್ಯುತ್ ಮಾರ್ಗದ ಕಾಮಗಾರಿ ಚುರುಕುಗೊಳಿಸಿ ಪ್ರತಿದಿನ ನಿರಂತರ 5 ಗಂಟೆ 3 ಫೇಸ್ ವಿದ್ಯುತ್ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಮನವಿಗೆ ಪ್ರತಿಕ್ರಿಯಿಸಿದ ತುಮಕೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಅವರು, ರೈತರಿಗೆ ಸಮಸ್ಯೆಯಾದರೆ ಅದು ಇಲಾಖೆಗೆ ಸಮಸ್ಯೆಯಾದಂತೆ ಚಿಕ್ಕಣ್ಣಸ್ವಾಮಿ
ದೇವಸ್ಥಾನದ ಬಳಿ ಶೀಘ್ರದಲ್ಲೇ ವಿದ್ಯುತ್ ಮಾರ್ಗ ಅಳವಡಿಸಲಾಗುವುದು, ಹಲವು ಲೈನ್ ಮ್ಯಾನ್ಗಳನ್ನು ತುಮಕೂರು ತಾಲ್ಲೂಕಿಗೆ ಈ ವಾರ ವರ್ಗಾಯಿಸಲಾಗಿದೆ. ಇನ್ನು 15ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದರು.