ಸುದ್ದಿಮೂಲ ವಾರ್ತೆ
ಮೈಸೂರು, ನ.2 : ಅನುದಾನಿತ ನೌಕರರಿಗೆ ಮಾರಕವಾಗಿರುವ ಪಿಂಚಣಿ ನಿಯಂತ್ರಣ ಕಾಯ್ದೆಯನ್ನು ರದ್ದುಗೊಳಿಸಿ, ಹಳೆಯ ನಿಶ್ಚಿತ ಪಿಂಚಣಿ ಜಾರಿಗಾಗಿ ಆಗ್ರಹಿಸಿ ಶಿವಮೊಗ್ಗದಲ್ಲಿ ನ. 5 ರಂದು ರಾಜ್ಯಮಟ್ಟದ ಸಮಾವೇಶ ನಡೆಸಲಾಗುವುದು ಎಂದು ರಾಜ್ಯ ಅನುದಾನಿತ ಶಾಲಾಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಮೈಸೂರು ಜಿಲ್ಲಾ ಘಟಕ ತಿಳಿಸಿದೆ.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶಿಂಡೇನಹಳ್ಳಿ, ಡಾ. ಶರತ್ ಕುಮಾರ್, ಸರ್ಕಾರಿ ಮತ್ತು ಅನುದಾನಿತ ನೌಕರರಿಗೆ 2006ರ ಮಾ.31 ಹಿಂದೆ ನಿವೃತ್ತಿಯ ನಂತರನಿವೃತ್ತಿ ಭತ್ಯೆ ಇತ್ಯಾದಿ ಸೌಲಭ್ಯಗಳನ್ನು ಸಮಾನವಾಗಿ ಕೊಡಲಾಗುತ್ತಿತ್ತು.
ಅನಂತರ ಏಪ್ರಿಲ್ ನಿಂದ ಅಂದಿನ ಸರ್ಕಾರ ಸರ್ಕಾರಿ ನೌಕರರಿಗೆ ಮಾತ್ರ ರಾಷ್ಟ್ರೀಯ ಪಿಂಚಣಿ ಯೋಜನೆ ಹೊಸ ಯೋಜನೆಯನ್ನು ಜಾರಿಗೆ ತಂದು, ಅನುದಾನಿತ ನೌಕರರನ್ನು ಈ ಪಿಂಚಣಿ ಸೌಲಭ್ಯದಿಂದ ಕೈಬಿಟ್ಟಿತು. ಅಲ್ಲದೆ ಸರ್ಕಾರವು ಅನುದಾನಿತ ಸಿಬ್ಬಂದಿಗಳ ಸೇವಾ ಮತ್ತು ಪಿಂಚಣಿ ಸೌಲಭ್ಯವನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ 2014ನ್ನು ಜಾರಿಗೊಳಿಸಲಾಗಿದೆ.
ಈ ವಿಧೇಯಕವನ್ನು ಪ್ರಶ್ನಿಸಿ, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸದರಿ ವಿಧೇಯಕವನ್ನು ವಜಾಗೊಳಿಸಿರುತ್ತದೆ. ಸದರಿ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವು ರಿಟ್ ಅರ್ಜಿ ಸಲ್ಲಿಸಿ ಪ್ರಕರಣವು ನ್ಯಾಯಾಲಯದಲ್ಲಿ ನಡೆಯುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ನೂತನ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಹಿಂದೆ ಇದ್ದಂತೆ ಹಳೆಯ ನಿಶ್ಚಿತ ಪಿಂಚಣಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರ್ಕಾರಿ ನೌಕರರಿಗೆ ಇರುವಂತೆ, ಅನುದಾನಿತ ನೌಕರರಿಗೂ ಆರೋಗ್ಯ ಸಂಜೀವಿನಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಸಂಘದ ಗೌ. ಕಾರ್ಯದರ್ಶಿ ಬಿ.ಆರ್.ಶಿವಕುಮಾರ್ ಮತ್ತಿತರರಯ ಇದ್ದರು.