ಬೆಂಗಳೂರು, ಜು.17: ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಅವ್ಯವಹಾರದ ತನಿಖೆಯನ್ನು ಈಗಾಗಲೇ ಸಿಬಿಐಗೆ ವಹಿಸಲಾಗಿದ್ದು, ಶೀಘ್ರದಲ್ಲಿಯೇ ಪೂರಕ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ವಿಧಾನಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಯು.ಬಿ. ವೆಂಕಟೇಶ್ ಅವರು ನಿಯಮ 72ರಡಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಬ್ಯಾಂಕಿಗೆ ಸಂಬಂಧಿಸಿದ ದಾಖಲೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಲು ಭಾಷಾಂತರಕಾರರಿಗೆ ನೀಡಲಾಗಿದೆ. 500 ಪುಟಗಳ ದಾಖಲೆಗಳು ಆಂಗ್ಲ ಭಾಷೆಗೆ ತರ್ಜುಮೆಗೊಂಡ ನಂತರ ಅಗತ್ಯ ಕ್ರಮ ಕೈಗೊಂಡು ಸಿಬಿಐಗೆ ವಹಿಸಲಾಗುವುದು. ಆದಷ್ಟು ಬೇಗ ತನಿಖೆ ಆರಂಭಗೊಳ್ಳುವಂತೆ ದಾಖಲೆಗಳನ್ನು ಪೈರೈಸಲಾಗುವುದು ಎಂದು ತಿಳಿಸಿದರು.
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ಅವ್ಯವಯಹಾರದ ಪ್ರಮಾಣವು ಅಗಾಧವಾಗಿದ್ದು ಬ್ಯಾಂಕಿನ ಪದಾಧಿಕಾರಿಗಳು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಸಾರ್ವಜನಿಕರಿಂದ ಅಪಾರ ಪ್ರಮಾಣದಲ್ಲಿ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ವಾಪಸ್ಸು ನೀಡದೇ ವಂಚನೆ ಎಸಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುವ ಅಗತ್ಯತೆ ಇರುವುದರಿಂದ ಈ ಪ್ರಕರಣದ ವಿಚಾರಣೆಯನ್ನು ಸಿ.ಬಿ.ಐ ಗೆ ವಹಿಸುವ ಬಗ್ಗೆ ಕಳೆದ ಜ.17 ರಂದು ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯಿಸಲಾಯಿತು.
ಭಾಷಾಂತರ ಇಲಾಖೆ ನಿರ್ದೇಶಕರು ಭಾಷಾಂತರಕ್ಕೆ ನೀಡಿರುವ ದಾಖಲೆಗಳು ಆಗಾಧವಾಗಿದ್ದು ಮಾನವ ಸಂಪನ್ಮೂಲದ ಕೊರತೆ ಇರುವುದರಿಂದ, ಕರ್ನಾಟಕ ಸರ್ಕಾರ ಅಧಿಸೂಚಿಸಿರುವ ಭಾಷಾಂತರಕಾರರನ್ನು ಸಂಪರ್ಕಿಸಿ, ಭಾಷಾಂತರಕ್ಕೆ ತಗಲುವ ಖರ್ಚುವೆಚ್ಚಗಳನ್ನು ತಮ್ಮ ಇಲಾಖೆಯೇ ಭರಿಸಿ ಅನುವಾದ ಕಾರ್ಯ ಮಾಡಿಕೊಳ್ಳಬೇಕೆಂದು ಹಿಂಬರಹ ನೀಡಿರುತ್ತಾರೆ. ದಾಖಲೆಗಳು ಆಂಗ್ಲ ಭಾಷೆಗೆ ಅನುವಾದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ವೇಳೆ ಮಾತನಾಡಿದ ಯು.ಬಿ. ವೆಂಕಟೇಶ್ ಮಾತನಾಡಿ, ಗುರು ರಾಘವೇಂದ್ರ ಬ್ಯಾಂಕ್ನಲ್ಲಿ ನಡೆದ ಅವ್ಯವಹಾರ ತನಿಖೆ ಮಾಡುವ ಮೂಲಕ ಸಂತ್ರಸ್ತರಿಗೆ ನ್ಯಾಯ ಕೊಡಬೇಕು. ಯಾವುದೇ ಕಾರಣಕ್ಕೂ ಬ್ಯಾಂಕ್ ವಿಲೀನ ಆಗದಂತೆ ನೋಡಿಕೊಳ್ಳಬೇಕು. ಅಲ್ಲದೆ, ಬೇರೆ ಯಾರಾದರೂ ಹೂಡಿಕೆಗೆ ಆಸಕ್ತಿ ವಹಿಸಿದರೆ ಅಂತಹ ವಿಚಾರಗಳ ಬಗ್ಗೆ ಸರ್ಕಾರ ಗಮನವಹಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಉತ್ತರಿಸಿದ ಸಚಿವ ಕೆ.ಎನ್. ರಾಜಣ್ಣ, ಬ್ಯಾಂಕ್ ವಿಲೀನ ಆಗಬಾರದು ಎಂಬುದೇ ಸರ್ಕಾರದ ಕಳಕಳಿ. ರೋಜರ್ ಪೇ ಎಂಬ ಸಂಸ್ಥೆ ಬ್ಯಾಂಕ್ನಲ್ಲಿ ಹೂಡಿಕೆಗೆ ಮುಂದೆ ಬಂದಿತ್ತು. ಆದರೆ, ಆ ಪ್ರಸ್ತಾವನೆಯನ್ನು ಆರ್ಬಿಐಗೆ ಕಳುಹಿಸಿದಾಗ ಅವರು ಒಪ್ಪಲಿಲ್ಲ ಎಂದು ಹೇಳಿದರು.
ಆಗ ಯು.ಬಿ. ವೆಂಕಟೇಶ್, ಇದರಲ್ಲಿ ಆರ್ಬಿಐನ ಕೆಲ ಅಧಿಕಾರಿಗಳೇ ಪ್ರಮುಖ ಅಪರಾಧಿಗಳು. ಬ್ಯಾಂಕ್ಗೆ ಪ್ರತಿವರ್ಷ ಪ್ರಶಸ್ತಿಗಳನ್ನು ನೀಡಿ ಕಳಪೆ ವ್ಯವಹಾರ ಇದ್ದರೂ ಉತ್ತೇಜನ ನೀಡಿದರು. ಈಗ ತಮ್ಮ ಹುಳುಕು ಹೊರಬರುತ್ತಿದೆ ಎಂಬ ಕಾರಣಕ್ಕಾಗಿ ವಿಲೀನದ ಪ್ರಸ್ತಾವನೆ ಕಳುಹಿಸಿದ್ದಾರೆ. ಅದನ್ನು ಯಾವುದೇ ಕಾರಣಕ್ಕೂ ಸರ್ಕಾರ ಒಪ್ಪಬಾರದು ಎಂದು ಹೇಳಿದರು.