ಹೊಸಕೋಟೆ, ಸೆ. 22 : ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲೀಕರಣ ಸಾಧಿಸಲು ಮಹಿಳಾ ಕೋ-ಆಪರೇಟಿವ್ ಸೊಸ್ಶೆಟಿಗಳು ಪೂರಕವಾಗಿವೆ ಎಂದು ಮಹಾಕವಿ ಕಾಳಿದಾಸ ಮಹಿಳಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಗೌರವಾಧ್ಯಕ್ಷೆ ಶಾಂತಮ್ಮ ಎಂಟಿಬಿ ನಾಗರಾಜ್ ತಿಳಿಸಿದರು.
ಹೊಸಕೋಟೆ ನಗರದ ಎಂವಿ ಬಡಾವಣೆಯಲ್ಲಿರುವ ಸೊಸೈಟಿ ಆವರಣದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.
ಕಾಳಿದಾಸ ಮಹಿಳಾ ಕೋ ಆಪರೇಟಿವ್ ಸೊಸೈಟಿ ಪ್ರಮುಖವಾಗಿ ಮಹಿಳೆಯರ ಅಭ್ಯುದಯದ ದೃಷ್ಟಿಯಿಂದ ಪ್ರಾರಂಭವಾದ ಸೊಸೈಟಿ. ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಅರ್ಥಿಕವಾಗಿ ಸಾಮಾಜಿಕವಾಗಿ ಮೇಲೆತ್ತುವ ನಿಲುವು ಸಂಸ್ಥೆಯಾಗಿದೆ. ಈಗಾಗಲೇ ಸೊಸೈಟಿಯಲ್ಲಿ 2551 ಜನ ಷೇರುದಾರರಿದ್ದು, ಸೊಸೈಟಿಯಲ್ಲಿ ಪ್ರಾಮಾಣಿಕವಾಗಿ ವ್ಯವಹಾರ ಮಾಡಿಕೊಂಡು ಅಭಿವೃದ್ದಿಯತ್ತ ಸಾಗಲು ಶ್ರಮಿಸಿದ್ದಾರೆ ಎಂದರು.
ಸೊಸೈಟಿ ಅಧ್ಯಕ್ಷೆ ಕೆ.ಮಾತಾ ನಾಗರಾಜ್ ಮಾತನಾಡಿ, ಸೊಸೈಟಿಯು ಪ್ರಸಕ್ತ ಸಾಲಿನಲ್ಲಿ 15 ಲಕ್ಷ ಲಾಭಾಂಶವನ್ನು ಗಳಿಸುವ ಮೂಲಕ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ತಾಲೂಕಿನ ಸೂಲಿಬೆಲೆ ಹೋಬಳಿಯ ಬೆಚಿಡಿಗಾನಹಳ್ಳಿ, ಕಸಬಾ ಹೋಬಳಿಯ ದೊಡ್ಡಹುಲ್ಲೂರು, ಜಡಿಗೇನಹಳ್ಳಿ ಹೋಬಳಿಯ ವಾಗಟ, ಕೋಡಿಹಳ್ಳಿ ಗ್ರಾಮ ಹೊರತುಪಡಿಸಿ ಎಲ್ಲಾ ಗ್ರಾಮಗಳು ಸೊಸೈಟಿ ಕಾರ್ಯವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸಹಕಾರ ಸಂಘದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಸೊಸೈಟಿ ಅಭಿವೃದ್ದಿಯತ್ತ ಸಾಗಲು ಸದಸ್ಯರ ಸಹಕಾರ ಅತ್ಯಗತ್ಯ ಎಂದರು.
ಸೊಸೈಟಿ ಉಪಾಧ್ಯಕ್ಷೆ ಎನ್.ಗೌರಮ್ಮ, ಬಿಎಂಆರ್ಡಿಎ ಮಾಜಿ ಅಧ್ಯಕ್ಷ ಸಿ.ನಾಗರಾಜ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವರಲಕ್ಕ್ಷ್ಮಿ ಸೇರಿದಂತೆ ಎಲ್ಲಾ ನಿರ್ದೇಶಕರು ಹಾಜರಿದ್ದರು.