ಸುದ್ದಿಮೂಲ ವಾರ್ತೆ
ಬೆಂಗಳೂರು, ಜು, 26: ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯತೆ ಸಾಧಿಸಿಕೊಂಡು ಮಳೆ ಅನಾಹುತಗಳಿಂದ ಆಗುವ ಜೀವಹಾನಿಗಳನ್ನು ತಪ್ಪಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದ ಬಳಿಕ ಅವರು ಮಾತನಾಡಿದರು.
ಹಿಂದಿನ ವರ್ಷಗಳ ಅನುಭವ ಮತ್ತು ಅನಾಹುತಗಳಿಂದ ಬಹಳಷ್ಟು ಸಾವಿನ, ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಜಿಲ್ಲಾಡಳಿತ, ಪೊಲೀಸ್ ಹಾಗೂ ಇನ್ನಿತರೆ ಇಲಾಖೆಗಳ ನಡುವಿನ ಸಮನ್ವಯತೆಯಿಂದ ಸಾವು, ಮಳೆ ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ. ಈ ದಿಕ್ಕಿನಲ್ಲಿ ಸೂಕ್ತ ಕ್ರಮ ವಹಿಸಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಪ್ರವಾಹ ಬಂದಾಗ ಬಹಳ ರೈತರನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪ್ರವಾಹದ ಮುನ್ಸೂಚನೆ ಬಂದ ಕೂಡಲೇ ಸ್ಥಳಾಂತರಕ್ಕೆ ಕ್ರಮ ವಹಿಸಿ. ಹಿಂದಿನ ಸರ್ಕಾರದ ವತಿಯಿಂದ ಪರ್ಯಾಯವಾಗಿ ಕಟ್ಟಲಾಗಿರುವ ಮನೆಗಳು ಯಾರೂ ವಾಸ ಮಾಡಲು ಕೂಡ ಯೋಗ್ಯವಲ್ಲ ಎನ್ನುವ ದೂರುಗಳು ಜನರಿಂದ ವ್ಯಾಪಕವಾಗಿ ಬರುತ್ತಿವೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳ ಕಡೆಗೆ ಹೆಚ್ಚು ಒತ್ತು ನೀಡಿ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
ಅನಾಹುತಗಳನ್ನು ತಪ್ಪಿಸಲು ಹೆಚ್ಚಿನ ಗಮನ ನೀಡಬೇಕು. ಜಿಲ್ಲಾಧಿಕಾರಿಗಳು ಪದೇ ಪದೇ ಪ್ರವಾಹವಾಗುವ ಸ್ಥಳಗಳಲ್ಲಿ ಜನರಿಗೆ ಮನವರಿಕೆ ಮಾಡಿ ಸ್ಥಳಾಂತರ ಮಾಡಿ ಜೀವಹಾನಿ ತಪ್ಪಿಸಬೇಕು ಎಂದು ಸೂಚಿಸಿದರು.
ನೆರೆ ಬಂದು ನೀರು ಹೆಚ್ಚಾದರೆ ಅದರ ಬಳಿ ಜನರು ಹೋಗದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡುವುದು ಹಾಗೂ ಅರಿವು ಮೂಡಿಸುವ ಕೆಲಸ ಮಾಡಿ ಪ್ರಾಣಹಾನಿಯನ್ನು ತಪ್ಪಿಸಬೇಕು. ಭೂ ಕುಸಿತ ಆಗಬಹುದಾದ ಸ್ಥಳಗಳ ಬಗ್ಗೆ ಒಂದು ಹಂತಕ್ಕೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇರುತ್ತದೆ. ಪೊಲೀಸ್, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮಧ್ಯೆ ಸಮನ್ವಯವಿದ್ದರೆ ಸಾಕಷ್ಟು ಜೀವಹಾನಿ ತಪ್ಪಿಸಬಹುದು. ಮಣ್ಣು ಕುಸಿತವಾಗುವ ಸ್ಥಳಗಳ ಬಗ್ಗೆ ಇಲಾಖೆಗಳಿಗೆ ಮಾಹಿತಿ ಇರುತ್ತದೆ. ಕಾಳಜಿಯಿಂದ ವರ್ತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನವರಿ ಒಂದರಿಂದ ಜುಲೈ 25 ರವರೆಗೆ 64 ಜನ ಮರಣಹೊಂದಿದ್ದಾರೆ. ಇವರಿಗೆ ತುರ್ತಾಗಿ ಪರಿಹಾರ ಒದಗಿಸಲಾಗಿದೆ. ಆದರೆ ಜಿಲ್ಲಾಡಳಿತ ಅಲರ್ಟ್ ಆಗಿದ್ದರೆ ಈ ಅನಾಹುತಗಳಲ್ಲಿ ಸಾಕಷ್ಟನ್ನು ತಪ್ಪಿಸಬಹುದಿತ್ತಲ್ಲವೇ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಮಳೆ ಸಾಧ್ಯತೆ, ಮಳೆಯ ಬಿರುಸಿನ ಬಗ್ಗೆ ಪ್ರತಿದಿನ ಮಾಹಿತಿ ನೀಡಬೇಕು. ಕಾಲು ಜಾರುವ ಕಡೆಗಳಲ್ಲಿ ಹೋಗಬಾರದು, ತುಂಬಿ ಹರಿವ ನದಿಗಳನ್ನು ಹಾಯಬಾರದು ಎಂದು ಸೂಚಿಸಬೇಕು. ಸಾವು ತಡೆಗಟ್ಟಲು ಹೆಚ್ಚಿನ ಶ್ರಮವಹಿಸಬೇಕು. ಅಂಗನವಾಡಿ, ಶಾಲಾ ಕಟ್ಟಡಗಳು, ಆಸ್ಪತ್ರೆಗಳ ಕಟ್ಟಡ ಶಿಥಿಲ ಆಗಿವೆ ಎನ್ನುವ ಮಾಹಿತಿ ಮೊದಲೇ ಗೊತ್ತಿರುತ್ತದೆ. ಯಾವ ಕಟ್ಟಡಗಳಲ್ಲಿ ಸೋರಿಕೆ ಆಗುತ್ತಿದೆ ಎನ್ನುವ ಮಾಹಿತಿಯೂ ಮೊದಲೇ ಗೊತ್ತಿರುತ್ತದೆ. ದುರಸ್ತಿ, ಸ್ಥಳಾಂತರ, ರಿಪೇರಿಗೆ ಸಾಕಷ್ಟು ಹಣ ಮೀಸಲಿಟ್ಟಿದ್ದರೂ ಈ ಬಗ್ಗೆ ಮೊದಲೇ ಕ್ರಮ ಏಕೆ ಕೈಗೊಳ್ಳುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು ಇಂತಹ ಉದಾಸೀನ ಮತ್ತು ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದರು.
ಪ್ರತಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಅನುದಾನ ಲಭ್ಯವಿದೆ. ಎಸ್.ಡಿ.ಆರ್.ಎಫ್ ನ ಅಡಿಯೂ ಅನುದಾನದ ಲಭ್ಯತೆ ಇದೆ . ದುರಸ್ತಿಗೆ ತಕ್ಷಣ ಕ್ರಮ ವಹಿಸಿ. ಹೆಚ್ಚಿನ ಅನುದಾನ ಅಗತ್ಯವಿದ್ದರೆ ಮನವಿ ಕಳುಹಿಸಿ. ಜಿಲ್ಲೆಯ ಎಲ್ಲಾ ಆಗುಹೋಗುಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ನಿಗಾ ವಹಿಸಿ.
ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ಉಳಿಯಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಅಡಿ ಆಗಿರುವ ಕೆಲಸಕ್ಕೆ ಹಣ ಪಾವತಿ ಮಾಡಲು ಯಾವುದೇ ನಿರ್ಬಂಧವಿಲ್ಲ. ಹೊಸ ಕಾಮಗಾರಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಕೂಡಲೇ ತೆಗೆದುಕೊಳ್ಳಲು ನಿರ್ಬಂಧವಿಲ್ಲ ಎಂದು ತಿಳಿಸಿದರು.
ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಕೃಷ್ಣಾ ನದಿಯ ನೀರು ಹರಿಸಿದರೆ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತದೆ. ನೀರು ಬಿಡುವ ಮುನ್ನವೇ ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಅನಾಹುತಗಳು ಸಂಭವಿಸದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕಲಬುರಗಿ ಜಿಲ್ಲಾಧಿಕಾರಿಗಳು ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಅಲ್ಲಿನ ಉಜ್ಜನಿ ಜಲಾಶಯದಿಂದ ನೀರು ಹರಿಸುವ ಮುನ್ನ ಎಚ್ಚರಿಕೆ ವಹಿಸಿ. ಕಲಬುರಗಿ, ವಿಜಯಪುರ ಜಿಲ್ಲಾಧಿಕಾರಿಗಳು ಸಂಪರ್ಕದಲ್ಲಿರಬೇಕೆಂದು ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಡಾ.ಜಿ. ಪರಮೇಶ್ವರ್, ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಡಾ.ಎಂ.ಸಿ. ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್ಮ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.