ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.20: ಇಂದು ಬಿಜೆಪಿ ಹಾಗೂ ದಳವನ್ನು ತೊರೆದು ಅನೇಕ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿ, ಮೈಸೂರು ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಬದಲಾವಣೆ ಬಯಸಿದ್ದಾರೆ. ವಿ. ಸೋಮಶೇಖರ್ ಅವರು ಸಿದ್ದರಾಮಯ್ಯ ಅವರ ಜತೆ ಶಾಸಕರಾಗಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅವರದೇ ಆದ ಸಾಧನೆ ಮಾಡಿದ್ದಾರೆ.
ಬಿಜೆಪಿ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಮ್ಮಂತಹವರಿಗೆ ಬಿಜೆಪಿಯಲ್ಲಿ ಸ್ಥಾನವಿಲ್ಲ. ದೇಶದ ಹಿತಕ್ಕಾಗಿ ಯಾವುದೇ ಷರತ್ತು ಇಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಹಾಗೂ ಪಕ್ಷದ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್ ಸೇರುತ್ತಿದ್ದಾರೆ. ಅವರನ್ನು ತುಂಬು ಹೃದಯದಿಂದ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ.
ಬಿಜೆಪಿ ಸರ್ಕಾರ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಆಸೀಫ್ ಸೇಠ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮ ನೀಡಿ ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ಬಹಳ ತೊಂದರೆ ಆಗಿದೆ. ಇಷ್ಟೇಲ್ಲಾ ಆದ ನಂತರ ನಾನು ಯಾವ ಮುಖ ಇಟ್ಟುಕೊಂಡು ಬಿಜೆಪಿಯಲ್ಲಿ ಮುಂದುವರಿಯಲಿ ಎಂದು ನಮ್ಮ ಜತೆ ಚರ್ಚೆ ಮಾಡಿ ಕಾಂಗ್ರೆಸ್ ಸೇರುತ್ತಿದ್ದಾರೆ.
ಬಸವೇಗೌಡರು ಮೂಡಾ ಅಧ್ಯಕ್ಷರಾಗಿದ್ದರು, ಅವರು ಅನೇಕ ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರೂ ಕೂಡ ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ.
ಅಬ್ದುಲ್ ಅಜೀಜ್ ಅವರು 2018ರಲ್ಲಿ ದಳದ ಅಭ್ಯರ್ಥಿಯಾಗಿದ್ದರು. ಅವರು ಕೂಡ ಇಂದು ಬೇಷರತ್ತಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಹೀಗೆ ಅನೇಕ ನಾಯಕರು ಪಕ್ಷ ಸೇರುತ್ತಿದ್ದು, ನಾವು ಎಲ್ಲಾ ನಾಯಕರನ್ನು ಹೃದಯಪೂರ್ವಕವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ.
ಇದಕ್ಕೂ ಮುನ್ನ ಸದಾಶಿವನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ನೀಂತರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಯಾರು ಏನಾದರೂ ಹೇಳಿಕೊಳ್ಳಲಿ. ಅಲ್ಪಸಂಖ್ಯಾತರೂ ಸೇರಿದಂತೆ ನಮ್ಮ ಪಕ್ಷಕ್ಕೆ ಎಲ್ಲಾ ಸಮುದಾಯದವರು ಬೇಕು. ರಾಜ್ಯದಲ್ಲಿ ಶಏ.99ರಷ್ಟು ಅಲ್ಪಸಂಖ್ಯಾತರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ. ಈ ಭಾಗದಲ್ಲಿ ಕಳೆದ 4 ಬಾರಿಯಿಂದಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುತ್ತಾ ಬಂದಿದ್ದು, ಈಗಲೂ ನೀಡಿದ್ದೇವೆ. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಕೇಳಿದ ಹಿನ್ನೆಲೆಯಲ್ಲಿ ಅಭ್ಯರ್ಥಿ ಬದಲಿಸಿದ್ದೇವೆ’ ಎಂದು ತಿಳಿಸಿದರು.