ಸುದ್ದಿಮೂಲ ವಾರ್ತೆ
ಬೆಂಗಳೂರು ನಗರ ಜಿಲ್ಲೆ, ಮಾ.28: ಪ್ರಜಾ ಪ್ರಭುತ್ವದಲ್ಲಿ ಸಾರ್ವಜನಿಕರ ಮತದಾರರ ಪಾತ್ರ ಪ್ರಮುಖವಾಗಿದೆ. ಸಾರ್ವಜನಿಕರು ಮತ ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯಆಯುಕ್ತರಾದ ತುಷಾರ್ ಗಿರಿನಾಥ್ ಅವರು ತಿಳಿಸಿದರು.
ಇಂದು ನಗರದ ಸರ್. ಕೆ.ಪಿ ಪುಟ್ಟಣ್ಣ ಶೆಟ್ಟಿ ಟೌನ್ ಹಾಲ್ನಲ್ಲಿ ನಡೆದ ಮುಂಬರುವ ವಿಧಾನಸಭಾ ಚುನಾವಣೆ ಸ್ವೀಪ್ ಚಟುವಟಿಕೆ ಭಾಗವಾಗಿ ನಮ್ಮ ಬೆಂಗಳೂರು ಐಕಾನ್ಸ್ ಆನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಬರುವ ವಿಧಾನಸಭಾ ಚುನಾವಣೆಗೆ ಬೆಂಗಳೂರು ನಗರದಲ್ಲಿ ಮತದಾನದ ಜಾಗೃತಿ ಮೂಡಿಸಲು ಬಿಬಿಎಂಪಿ ವತಿಯಿಂದ ಪ್ರಮುಖ ಐದು ವ್ಯಕ್ತಿಗಳಾದ ಕನ್ನಡ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ಕಲಾವಿದ ಮಾಸ್ಟರ್ ಆನಂದ್, ಜನಪದ ಹಾಡುಗಾರ ಮೋಹನ್ ಕುಮಾರ್, ಅರ್ಜುನ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್, ಅರ್ಜುನ ಪ್ರಶಸ್ತಿ ವಿಜೇತೆ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ್ತಿ ತೇಜಸ್ವಿನಿ ಬಾಯಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಸ್ವಿಮ್ಮರ್ ಶರತ್ ಗಾಯಕವಾಡ್ ರವರನ್ನು ನಮ್ಮ ಬೆಂಗಳೂರು ಐಕಾನ್ಸ್ ಗಳಾಗಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಬಿ.ಬಿ.ಎಂ.ಪಿ.ಯು ಮತೆಗಟ್ಟೆಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ವಿಕಲಚೇತನರಿಗಾಗಿ ರ್ಯಾಂಪ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಮತದಾರರಿಗೆ ಚುನಾವಣೆಯ 15 ದಿನಗಳ ಮುಂಚೆಯೇ ಮತದಾರ ಚೀಟಿಗಳನ್ನು ವಿತರಿಸಲಾಗುವುದು. ಮತಗಟ್ಟೆಗಳಲ್ಲಿ ಸಾರ್ವಜನಿಕರಿಗೆ ತಮ್ಮ ಮತಗಟ್ಟೆಯ ಕೇಂದ್ರಗಳ ಬಗ್ಗೆ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ವೋಟರ್ ಹೆಲ್ಪ್ ಲೈನ್ ಆ್ಯಪ್ ನಲ್ಲಿ ಎಫಿಕ್ ನಂಬರ್ ಬಳಸಿ, ಮತಗಟ್ಟೆ ಕೇಂದ್ರಗಳ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ನಂತರ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಉತ್ತಮ ರೀತಿಯಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಬೆಂಗಳೂರು ನಗರ ವೇಗ ಬೆಳೆಯುತ್ತಿದೆ ಮತ ಚಲಾವಣೆಯಲ್ಲಿ ಮಾತ್ರ ಶೇಕಡವಾರು ಸಾಕಷ್ಟು ಹಿಂದಿದ್ದಾರೆ. ಈ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಿ ಎಲ್ಲರೂ ಮತದಾನ ಮಾಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಉಜ್ಜಲ್ ಕುಮಾರ್ ಘೋಷ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಸಂಗಪ್ಪ, ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ. ಹರೀಶ್ ಕುಮಾರ್, ಡಾ. ಜಗದೀಶ್ ನಾಯ್ಕ್, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಚುನಾವಣಾ ವಿಭಾಗದ ಉಪ ಆಯುಕ್ತರಾದ ಉಮೇಶ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.