ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.8: ಸೂರು ಕಲ್ಪಿಸಲು ವಸತಿ ಸಚಿವರ ಮುಂದೆ ಕಣ್ಣೇರು ಹಾಕಿದ ಮಹಿಳೆಯರು, ಅಧಿಕಾರಿಗಳಿಗೆ ಕೈಮುಗಿದು ಗೋ ಗೆರೆದ ಹಿರಿಯ ನಾಗರಿಕರು, ಶೆಡ್ ಗಳಲ್ಲಿ ಇಲಿ -ಹೆಗ್ಗಣ ಕಾಟದ ನಡುವೆ ರಾತ್ರಿ ಇಡೀ ಜಾಗರಣೆ ಮಾಡುವಂತಾಗಿದೆ ಎಂದು ಅವಲತ್ತುಕೊಂಡ ಮಕ್ಕಳು.
ಇದು ಹೆಬ್ಬಾಳದ ಕುಂತಿ ನಗರದಲ್ಲಿ ಶುಕ್ರವಾರ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳ ಜತೆ ಭೇಟಿ ನೀಡಿದಾಗ ಕಂಡು ಬಂದ ದೃಶ್ಯ.
ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರೂಪಿಸಿರುವ ಪ್ರಧಾನ ಮಂತ್ರಿ ಅವಾಸ್ ವಸತಿ ಯೋಜನೆ ಎರಡು ವರ್ಷ ಆದರೂ ಪೂರ್ಣ ಗೊಂಡಿಲ್ಲ. ಗುಣಮಟ್ಟದ ಮನೆ ಕಟ್ಟಿಕೊಡುತ್ತಿದ್ದಾರೆ. ಕೂಲಿ ಮಾಡಿ ಜೀವನ ಮಾಡುತ್ತಿದ್ದೇವೆ. ಜೀವನ ನಡೆಸಲು ಊಟ ತಿಂಡಿಗೆ ಕಷ್ಟ ಆಗುತ್ತಿದೆ. ಫಲಾನುಭವಿ ವಂತಿಗೆ ಮೂರೂವರೆಯಿಂದ ನಾಲ್ಕು ಲಕ್ಷ ವರೆಗೆ ಪಾವತಿ ಮಾಡಲು ಆಗುತ್ತಿಲ್ಲ. ನಮಗೆ ದಯವಿಟ್ಟು ಮನೆ ಕಟ್ಟಿಕೊಡಿ ಎಂದು ಮನವಿ ಮಾಡಿಕೊಂಡರು.
ಸ್ಥಳೀಯ ವಾಸಿಗಳಾದ
ನೇತ್ರ, ಅಣ್ಣಿ ಯಮ್ಮ, ಮುತ್ಯಾ ಲಮ್ಮ, ವೆಂಕಟೇಶ್ ಅವರು ನಮ್ಮ ಜೀವನ ರಸ್ತೆಗೆ ಬಂದಿದೆ. ಮಕ್ಕಳಿಗೆ ವಿದ್ಯೆ ಕಲಿಸಲು ಆಗುತ್ತಿಲ್ಲ. ಆರೋಗ್ಯ ಸಮಸ್ಯೆ ಎಂದರೆ ಚಿಕಿತ್ಸೆ ಗೆ ಹಣ ಇಲ್ಲದಂತಾಗಿದೆ ಎಂದು ಕಣ್ಣೀರು ಹಾಕಿದರು.
ಪೇಪರ್ ಹಾಯುವುದು, ಮನೆ ಕೆಲಸ, ರಸ್ತೆ ಬದಿ ಚಪ್ಪಲಿ ಹೊಲೆದು ಜೀವನ ಸಾಗಿಸುತ್ತಿದ್ದೇವೆ ಎಂದು ಹೇಳಿದರು.
ಮನೆ ಯಾವಾಗ ಕಟ್ಟಿಕೊಡುತ್ತೀರಿ ಪ್ಲೀಸ್ ಎಂದ ಮಹಿಳೆಯರು
ಬೆಂಗಳೂರು:ಬಾಡಿಗೆ ಕಟ್ಟಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಶೆಡ್ ಗಳಲ್ಲೇ ಹಬ್ಬ -ಮದುವೆ ಮಾಡುವಂತಾಗಿದ್ದು ಯಾವಾಗ ಮನೆ ಕಟ್ಟಿಕೊಡುತ್ತೀರಿ ಸರ್ ಪ್ಲೀಸ್ ಎಂದು ಸರ್ವಜ್ಞ ನಗರ ಕ್ಷೇತ್ರದ ಚಟ್ಟಪ್ಪ ಗಾರ್ಡನ್ ಕೊಳೆಗೇರಿ ವಾಸಿಗಳು ವಸತಿ ಸಚಿವ ಜಮೀರ್ ಅಹಮದ್ ಅವರಲ್ಲಿ ಮನವಿ ಮಾಡಿದ್ದರು.
ಹತ್ತಾರು ವರ್ಷ ಗಳಿಂದ ತಾತ ಮುತ್ತಾತ ಕಾಲದಿಂದ ಇಲ್ಲಿ ಬದುಕುತ್ತಿದ್ದೇವೆ, ಇಲ್ಲೇ ನಮ್ಮ ಜೀವನ,ಇಲ್ಲಿ ಬಿಟ್ಟರೆ ಬೇರೆ ಬದುಕು ಇಲ್ಲ, ದಯವಿಟ್ಟು ಬೇಗ ಮನೆ ಕಟ್ಟಿಕೊಡಿ ನಮಗೆ ಫಲಾನುಭವಿ ವಂತಿಗೆ ಪಾವತಿ ಮಾಡಲು ಆಗದು. ಕೂಲಿ ಮಾಡಿ ಜೀವನ ಸಾಗಿಸುವುದೇ ಕಷ್ಟ ವಾಗಿದೆ ಎಂದು ಸ್ಥಳೀಯ ಪ್ರೇಮಾವತಿ, ಅನಿತಾ ಎಂಬುವರು ಆಳಲು ತೋಡಿಕೊಂಡರು.
ದಯವಿಟ್ಟು ನಮಗೆ ಮನೆ ಕಟ್ಟಿಕೊಡಿ, ಹೊಸ ಮನೆ ಕಟ್ಟಿಕೊಡುತ್ತಾರೆ ಎಂದು ಇರುವ ಮನೆ ಬಿಟ್ಟು ಶೆಡ್ ಹಾಗೂ ಬಾಡಿಗೆ ಮನೆ ಯಲ್ಲಿ ಎರಡು ವರ್ಷದಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ಹೇಳಿದರು.
ಚಟ್ಟಪ್ಪ ಗಾರ್ಡನ್ ಕೊಳೆಗೇರಿಯಲ್ಲಿ 2.30 ಎಕರೆ ಜಾಗದಲ್ಲಿ 37 ಕೋಟಿ ರೂ. ವೆಚ್ಚದಲ್ಲಿ 209 ಮನೆ ನಿರ್ಮಾಣ ಆಗುತ್ತಿದ್ದು ಪ್ರತಿ ಮನೆಯ ವೆಚ್ಚ ಸರಾಸರಿ 6.20 ಲಕ್ಷ ರೂ. ಆಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದ ಸಬ್ಸಿಡಿ ಹೊರತುಪಡಿಸಿ ಫಲಾನುಭವಿ 2.75 ಲಕ್ಷ ರೂ. ಕೊಡಬೇಕಿದ್ದು ಎಲ್ಲರೂ ಬಡವರು ಆಗಿರುವ ಕಾರಣ ಕಟ್ಟಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಗಳು ಸಾಲ ನೀಡಲು ಮುಂದಾಗುತ್ತಿಲ್ಲ. ಹೀಗಾಗಿ ಮನೆ ಅರ್ಧ ಕ್ಕೆ ನಿಂತು ಅಲ್ಲಿನ ವಾಸಿಗಳು ತೊಂದರೆ ಪಡುವಂತಾಗಿದೆ.
ಮೆಚ್ಚುಗೆ
ಸಚಿವ ಜಮೀರ್ ಅಹಮದ್ ಖಾನ್ ಹಾಗೂ
ಗುಣಮಟ್ಟದ ಬಗ್ಗೆ ಮೆಚ್ಚುಗೆ
ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಅವರು ಕಾಮಗಾರಿ ಗುಣಮಟ್ಟ ದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಆದಷ್ಟು ಶೀಘ್ರ ಯೋಜನೆ ಪೂರ್ಣ ಗೊಳಿಸುವ ಬಗ್ಗೆ ಯೋಚಿಸಿ ಎಂದು ಸೂಚನೆ ನೀಡಿದರು.
ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು ಉಪಸ್ಥಿತರಿದ್ದರು.
ಕುಂತಿ ನಗರ ಕೊಳೆಗೇರಿಯಲ್ಲಿ
402 ಮನೆ 31 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಪ್ರತಿ ಮನೆಗೆ 7 ಲಕ್ಷ ರೂ. ವೆಚ್ಚ ಆಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಂದ ಎಸ್ ಸಿ ಎಸ್ ಟಿ ವರ್ಗಕ್ಕೆ 3.50 ಲಕ್ಷ ರೂ., ಸಾಮಾನ್ಯ ವರ್ಗಕ್ಕೆ 2.70 ಲಕ್ಷ ರೂ. ಸಬ್ಸಿಡಿ ಸಿಗುತ್ತಿದ್ದು ಉಳಿದದ್ದು ಫಲಾನುಭವಿ ಕಟ್ಟಬೇಕು. ಆದರೆ ವಂತಿಗೆ ಪಾವತಿ ಆಗದೆ ಮನೆ ಅರ್ಧ ಕ್ಕೆ ನಿಂತಿವೆ.
ಸಿಎಂ ಜತೆ ಚರ್ಚೆ – ಜಮೀರ್ ಅಹಮದ್ ಖಾನ್
2013 ರಿಂದ 2023 ರವರೆಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ 1.80 ಲಕ್ಷ ಮನೆ ನಿರ್ಮಾಣ ಕ್ಕೆ ಯೋಜನೆ ರೂಪಿಸಿದ್ದು 295 ಯೋಜನೆಗಳಲ್ಲಿ ಒಂದೂ ಪೂರ್ಣ ಗೊಂಡಿಲ್ಲ. ಒಂದೇ ಒಂದು ಮನೆಯೂ ಕೊಟ್ಟಿಲ್ಲ. ಯಾಕೆಂದರೆ ಕೆಂದ್ರ ರಾಜ್ಯ ಸರ್ಕಾರದ ಸಬ್ಸಿಡಿ ಹಣ ಬಿಟ್ಟರೆ ಫಲಾನುಭವಿ ವಂತಿಗೆ ಪಾವತಿ ಮಾಡದ ಕಾರಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.
ಹೀಗಾಗಿ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಬಾಕಿ ಉಳಿದಿರುವ ಮನೆ ಕಾಮಗಾರಿ ಪೂರ್ಣ ಗೊಳಿಸಲು ಮುಖ್ಯಮಂತ್ರಿ ಅವರ ಜತೆಯೂ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದೇನೆ. ಎಲ್ಲರೂ ಬಡವರು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಫಲಾನುಭವಿಗಳ ವಂತಿಗೆ ಪಾವತಿ ಮಾಡಲು ಅವರಿಂದ ಆಗುತ್ತಿಲ್ಲ. ಇವರ ಬಳಿ ಏನೂ ಆಧಾರ ಇಲ್ಲದ ಕಾರಣ ಬ್ಯಾಂಕ್ ಸಾಲ ಸಹ ಸಿಗುತ್ತಿಲ್ಲ.ಅಲ್ಲಿನ ವಾಸಿಗಳು ರಸ್ತೆ ಯಲ್ಲಿ ಬದುಕು ವಂತಾಗಿದ್ದು ಆದಷ್ಟು ಬೇಗ ಮನೆ ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಮಾರ್ಗ ಹುಡುಕ ಲಾಗುತ್ತಿದೆ.