ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ನ.5 : ತಾಲ್ಲೂಕಿನ ಇಡ್ಲೊಡು ಗ್ರಾಮದ ಸಮೀಪವಿರುವ ರೈತರ ಜಮೀನುಗಳಿಗೆ ಭೇಟಿ ನೀಡಿದ ಮಾಜಿ ಸಚಿವ ಸಿ.ಟಿ. ರವಿ ನೇತೃತ್ವದ ಬಿಜೆಪಿ ತಂಡ ಬರಪೀಡಿತ ರೈತರ ಬೆಳೆಗಳನ್ನು ವೀಕ್ಷಣೆ ಮಾಡಲಾಯಿತು.
ರೈತರಿಗೆ ದಿನಕ್ಕೆ 5 ಗಂಟೆ ವಿದ್ಯುತ್ ಕೊಡುತ್ತೇವೆ ಎಂದವರು ಕೇವಲ 3 ಗಂಟೆ ಕೊಡುತ್ತಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆ ಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದರಿಂದ ರೈತರ ಪಂಪ್ ಸೆಟ್, ಟಿಸಿಗಳು ಸುಟ್ಟು ಹೋಗುತ್ತಿವೆ. ಬರ ಪರಿಹಾರ ಸೇರಿ ಪ್ರತಿಯೊಂದಕ್ಕೂ ಕೇಂದ್ರದತ್ತ ಬೊಟ್ಟು ಮಾಡುತ್ತಾರೆ. ನಿಮ್ಮ ಖಜಾನೆ ಖಾಲಿಯಾಗಿದ್ಯಾ? ರಾಜ್ಯ ಸರ್ಕಾರ ದಿವಾಳಿಯಾಗಿದೆಯಾ? ಘೋಷಣೆ ಮಾಡಿ ಎಂದು ಸಿ.ಎಂ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಸಿ.ಟಿ.ರವಿ ಒತ್ತಾಯಿಸಿದರು.
ಕೇಂದ್ರಕ್ಕೆ ರಾಜ್ಯ ಸರ್ಕಾರ 17 ಸಾವಿರ ಕೋಟಿ ರೂ. ಕೇಳಿದ್ದಾರೆ. ಬರಪೀಡಿತ ಪ್ರದೇಶಗಳಿಗೆ ನೀವು ಭೇಟಿ ಕೊಟ್ಟಿದ್ದೀರಾ ಹೇಳಿ? ಸಿಎಂ ಸಿದ್ದರಾಮಯ್ಯ ಚೆನ್ನಾಗಿ ಹಂಪಿಯಲ್ಲಿ ಡಾನ್ಸ್ ಮಾಡಿದ್ದೀರಿ, ಆದರೆ ನೀವು ಡಾನ್ಸ್ ಮಾಡುವ ಟೈಮ್ ಎಂತದ್ದು ಸಿದ್ದರಾಮಯ್ಯನವರೇ? ನಿಮ್ಮ ಡಾನ್ಸ್ ನೋಡಿ ಸಂತಸಪಡುವ ಸ್ಥಿತಿಯಲ್ಲಿಲ್ಲ ಎಂದು ಟೀಕಿಸಿದರು.
ನಿಮ್ಮ ಸರ್ಕಾರ ತಾಳ ತಪ್ಪಿದೆ, ನಾನೇ ಮುಖ್ಯಮಂತ್ರಿ ನಾನೇ ಮುಖ್ಯಮಂತ್ರಿ ಅಂತ ಕಿತ್ತಾಡುತ್ತಿದ್ದೀರಿ. ನಿಮ್ಮ ತಪ್ಪನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಎಂದ ಅವರು, ಸುರ್ಜೇವಾಲ ಕೈಗೆ ಸರ್ಕಾರದ ಮತ್ತೋಂದು ಕಿಲಿ ಕೈ ಕೊಟ್ಟಿದ್ದೀರಿ. ಇದರ ಪರಿಣಾಮ ಏನೂ ಅರಿತಿದ್ದೀರಾ? ಮೈಸೂರು ದಸರಾದಲ್ಲಿ ಕಲಾವಿದರಿಗೆ ಸರ್ಕಾರ ಕೊಟ್ಟ ಚೆಕ್ ಬೌನ್ಸ್ ಆಗಿದೆ. ಇದರಿಂದ ರಾಜ್ಯದ ಮಾನ ಹರಾಜಾಗಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಿಂದ ಲಂಚ ಕೇಳುತ್ತಾರೆ ಎಂದರ ಪರಿಸ್ಥಿತಿ ಹೇಗಿದೆ ಎಂದು ಅರ್ಥವಾಗುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯರನ್ನು ನಂಬಿದ್ದರೆ ಅರ್ಧ ಜನ ಸಾಯಬೇಕಿತ್ತು
ಸಿದ್ದರಾಮಯ್ಯನವರೇ ಎಲ್ಲಿ ನಿಮ್ಮ 10 ಕೆ.ಜಿ. ಅಕ್ಕಿ? 5 ಕೆಜಿ ಕೊಡುತ್ತಿರುವುದು ನರೇಂದ್ರ ಮೋದಿ. ಆದರೆ, ನೀವು ಅದರಲ್ಲೂ ಕಡಿತ ಮಾಡಿ ಕೊಡುತ್ತಿದ್ದೀರಿ. ಸಿದ್ದರಾಮಯ್ಯನ ನಂಬಿ ಜನ ಬದುಕುವುದಾಗಿದ್ದರೆ ಅರ್ಧ ಜನ ಸಾಯಬೇಕಿತ್ತು. ಕಾಂಗ್ರೆಸ್ನವರನ್ನು ನಂಬಿದರೆ ರಾಜ್ಯ, ದೇಶದಲ್ಲೂ ಅರ್ಧ ಜನ ಸಾಯಬೇಕು. 5 ಕೆಜಿ ಅಕ್ಕಿ ಮುಂದುವರಿಸುತ್ತೀವಿ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಸಿದ್ದರಾಮಯ್ಯ ನಂಬಿ ಜನ ಊಟ ಮಾಡುವುದಾದರೆ ಉಪವಾಸ ಇದ್ದು ಸಾಯಬೇಕು. ಮೋದಿ ಪುಣ್ಯಾತ್ಮ ಕೋಡುತ್ತಿರುವುದರಿಂದ ಜನ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಲವಾದಿ ನಾರಾಯಣಸ್ವಾಮಿ,ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ, ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ,ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ,ಮಾಜಿ ಶಾಸಕ ಎಂ.ರಾಜಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ , ಬಿಜೆಪಿ ಮುಖಂಡ ಸೀಕಲ್ ಆನಂದ ಗೌಡ ಹಾಜರಿದ್ದರು.