ಸುದ್ದಿಮೂಲ ವಾರ್ತೆ
ನವದೆಹಲಿ, ಜೂ.2: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸುವ ಸಂಪುಟದ ನಿರ್ಣಯದ ಜೊತೆಗೆ ಯಾವಾಗದಿಂದ ಅದು ಜಾರಿ ಆಗಲಿದೆ ಎಂದು ತಿಳಿಸಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಪ್ರಣಾಳಿಕೆಯಲ್ಲಿ ಮುದ್ರಿಸಿರುವಂತೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಉಚಿತ ಎಂದಿದ್ದೀರಿ. ಅದು ಪ್ರತಿ ಕುಟುಂಬಕ್ಕೆ ಅಲ್ಲ; ನಾವು ಕೊಟ್ಟ ಮಾತಿನಂತೆ ನಡೆಯುವವರು ಎಂದಿದ್ದೀರಿ. ಈಗ ನೀವು ಕುಟುಂಬಕ್ಕೆ 10 ಕೆಜಿ ಅನ್ನುತ್ತೀರಲ್ಲವೇ? ಎಂದು ಪ್ರಶ್ನಿಸಿದರಲ್ಲದೆ, ಜಮೀರ್ ಅಹ್ಮದ್ ಅವರು ಮನೆಮನೆ ಭೇಟಿ ವೇಳೆ ಮನೆಯಲ್ಲಿ 7 ಜನರಿದ್ದರೆ 70 ಕೆಜಿ ಅಕ್ಕಿ ಎಂದಿದ್ದ ವಿಡಿಯೋ ನೋಡಿದ್ದೇನೆ. ಈಗ ನೀವು ಪ್ರತಿ ಕುಟುಂಬಕ್ಕೆ 10 ಕೆಜಿ ಎಂದಿದ್ದೀರಿ. ಅದು ವ್ಯಕ್ತಿಗೋ ಕುಟುಂಬಕ್ಕೋ ಎಂದು ಸ್ಪಷ್ಟಪಡಿಸಿ ಎಂದು ಕೇಳಿದರು.
ವೆನಿಜುವೆಲ ಎಂಬ ರಾಷ್ಟ್ರ ಈ ರೀತಿ ಕೊಡುತ್ತ ಕೊಡುತ್ತ ದಿವಾಳಿ ಆಗಿ ಹೋಗಿದೆ. ಹಾಗೇ ನಮ್ಮ ರಾಜ್ಯ ಆಗದಿರಲಿ ಎಂದು ಆಶಿಸಿದ ಸಿ.ಟಿ. ಅವರು, ನೀವು ಬುದ್ಧಿವಂತರಿದ್ದೀರಿ. ಹಣ ಜೋಡಿಸುವ ಸಾಮಥ್ರ್ಯ ಇದೆ ಎಂದರಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ನಮ್ಮ ರಾಜ್ಯದ ಸಂಪನ್ಮೂಲ, ಸಾಲ, ಮೂಲಸೌಕರ್ಯದ ಮೇಲೆ ಹೂಡಿಕೆ ಎಷ್ಟು? ಸಾಲದ ಮೇಲೆ ಕಟ್ಟುವ ಬಡ್ಡಿ ಎಷ್ಟು? ಸಂಬಳ, ನಿವೃತ್ತಿ ವೇತನಕ್ಕೆ ಎಷ್ಟು ಹಣ ವಿನಿಯೋಗ ಆಗುತ್ತಿದೆ? ಎಂದು ಪ್ರಶ್ನಿಸಿದ ಅವರು, ಮೂಲ ಸೌಕರ್ಯದ ಮೇಲೆ ಹೂಡಿಕೆ ಮೂಲಕ ಆದಾಯ ಕ್ರೋಡೀಕರಣ ಸಾಧ್ಯವಿದೆ ಎಂದು ನೆನಪಿಸಿದರು. ಇಲ್ಲವಾದರೆ ಯೋಜನೆಗಳ ಅನುಷ್ಠಾನ ಸಾಧ್ಯವಿಲ್ಲ ಎಂದು ತಿಳಿಸಿದರು.
ಆರ್ಥಿಕ ಸಂಕಷ್ಟದ ಕುರಿತು ಎಚ್ಚರವಿರಲಿ
ಗ್ಯಾರಂಟಿಗಳ ಅನುಷ್ಠಾನದ ಹಂತದಲ್ಲಿ ಲೋಪದೋಷ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತದ ಮೇಲಿದೆ ಎಂದು ಎಚ್ಚರಿಸಿದರು. ಮೂಲಸೌಕರ್ಯದ ಹೂಡಿಕೆಯಲ್ಲಿ ಕೊರತೆ ಆದರೆ ಅದರ ಪರಿಣಾಮ ಉದ್ಯೋಗ ಸೃಷ್ಟಿಯ ಮೇಲೆ ಆಗಿ, ಆದಾಯ ಗಳಿಕೆಯೂ ಕಡಿಮೆ ಆಗಲಿದೆ. ಇದರ ಕಡೆಗೂ ಲಕ್ಷ್ಯ ಇರಲಿ ಎಂದು ಸಿ.ಟಿ.ರವಿ ಅವರು ತಿಳಿಸಿದರು.
ಸ್ವಾವಲಂಬಿ ಆಗುವ ಯೋಜನೆಗಳಿಗೆ ಒತ್ತು ಕೊಡದೆ ಇದ್ದರೆ ಮುಂದೊಂದು ದಿನ ನಮ್ಮನ್ನು ಅದು ವೆನಿಜುವೆಲ, ಶ್ರೀಲಂಕ, ಪಾಕಿಸ್ತಾನದಂಥ ಆರ್ಥಿಕ ಸಂಕಷ್ಟದ ಪರಿಸ್ಥಿತಿಗೆ ದೂಡಬಹುದು. ಹಾಗೆ ಆಗದೆ ಇರಲು ನಾವು ಏಕ್ ದಿನ್ ಕಾ ಸುಲ್ತಾನ್ ಆಗಬಾರದು ಎಂದು ಎಚ್ಚರಿಕೆ ನೀಡಿದರು.