ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 30: ಯೋಜನಾ ಇಲಾಖೆಗೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಯೋಜನೆ, ಕಾರ್ಯಕ್ರಮ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ. ಸುಧಾಕರ್ ತಿಳಿಸಿದರು.
ಅವರು ಇಂದು ವಿಕಾಸಸೌಧದ ಕೊಠಡಿ ಸಂಖ್ಯೆ 123 ರಲ್ಲಿ ಹಮ್ಮಿಕೊಂಡಿದ್ದ, ಇಲಾಖಾ ಪರಿಚಯ ಕುರಿತ ಸಭೆಯಲ್ಲಿ ಮಾತನಾಡಿದ ಸಚಿವರು, ಅಧಿಕಾರಿಗಳು ಇಲಾಖೆಯ ಕಾರ್ಯಕ್ರಮಗಳು ಅಭಿವೃದ್ಧಿಯಾಗದೇ ಇರುವ ಕಡೆ ಹೆಚ್ಚು ಗಮನ ನೀಡಿ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಇಚ್ಚಿಸಿದ್ದು, ಅಧಿಕಾರಿಗಳು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕೆಂದರು.
ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸರ್ಕಾರವು ಉದ್ದೇಶವನ್ನು ಹೊಂದಿದ್ದು, ಅದರಂತೆ ಅಧಿಕಾರಿಗಳು ಕೆಲಸ ನಿರ್ವಹಿಸುವುದರ ಜೊತೆಗೆ ಸರ್ಕಾರಕ್ಕೆ ಸಹಕಾರ ನೀಡಬೇಕೆಂದರು.
ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಸಚಿವರನ್ನು ಸ್ವಾಗತಿಸಿ, ಇಲಾಖೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಸಚಿವರ ಮಾರ್ಗದರ್ಶನದಲ್ಲಿ ಇಲಾಖೆಯನ್ನು ಅಭಿವೃದ್ಧಿ ಪಥದತ್ತ ಕೊಡೊಯ್ಯಲು ಪ್ರಾಮಾಣಿಕವಾಗಿ ಶ್ರಮವಹಿಸುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ಯೋಜನೆ, ಕಾರ್ಯಕ್ರಮ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.