ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ.9 ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಖಾಜಿ ಹೊಸಹಳ್ಳಿ ಗ್ರಾಮಕ್ಕೆ ಮಂಜೂರು ಮಾಡಲಾಗಿದ್ದ ಜಮೀನಿಗೆ ಅಕ್ರಮವಾಗಿ ಪೋಡಿ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭ ಮಾಡಿ ಕೆಇಬಿ ವೃತ್ತ, ಜೆಸಿ ವೃತ್ತದ ಮೂಲಕ ತಾಲೂಕು ಕಚೇರಿವರೆಗೆ ಕಾಲ್ನಡಿಗೆಯಲ್ಲಿ ಬಂದು ತಹಸೀಲ್ದಾರ್ ವಿಜಯ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಂಜುನಾಥ್ ಅಣ್ಣಯ್ಯ ಮಾತನಾಡಿ. ಖಾಜಿ ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಗೆ ಸೇರಿದ ಸರ್ವೇ ನಂಬರ್ 6ಲ್ಲಿ ಒಟ್ಟು 26 ನಿವಾಸಿಗಳು ಸಾಗುವಳಿ ಚೀಟಿ ಪಡೆದುಕೊಂಡಿರುತ್ತಾರೆ. ಆದರೆ, ಹಳೆಯ ಸರ್ವೇ ನಂಬರ್ 6 ಹೊಸ ಸರ್ವೆ ನಂಬರ್ 103ರಲ್ಲಿ 1 ಎಕರೆ 20ಗುಂಟೆ ಜಮೀನನ್ನು ರಾಜಕೀಯ ಪ್ರಭಾವ ಬಳಸಿ ವೆಂಕಟೇಶಪ್ಪ ಎಂಬುವವರಿಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಿ ಪೋಡಿ ಮಾಡಲಾಗಿದೆ ಎಂದು ಆರೋಪಿಸದರು.
ಇದು ಕಾನೂನು ಬಾಹಿರವಾಗಿದ್ದು ಕೂಡಲೆ ಪೋಡಿ ರದ್ದು ಮಾಡಬೇಕಿದೆ. ಪ್ರಮುಖವಾಗಿ ಮಂಜೂರು ಮಾಡಿ ಪೋಡಿ ಮಾಡಿರುವ ಜಾಗ ಕಲ್ಲು ಬಂಡೆಗಳಿಂದ ಕೂಡಿದ್ದು, ಕೃಷಿಗೆ ಯೋಗ್ಯವಾದ ಜಮೀನು ಆಗಿರುವುದಿಲ್ಲ. ಇವರು ಗ್ರಾಮದ ವ್ಯಕ್ತಿ ಆಗಿಲ್ಲದಿದ್ದರೂ ಸಹ ಅಕ್ರಮವಾಗಿ ಪೋಡಿ ಮಾಡಿ, ವ್ಯವಸಾಯಕ್ಕೆ ಯೋಗ್ಯ ಭೂಮಿಯಲ್ಲಿ ಸುಮಾರು 75 ರಿಂದ 80 ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಪಲಾನುಭವಿಗಳಿಗೆ ಪೋಡಿ ಮಾಡದಿರುವುದು ಖಂಡನೀಯ ಎಂದರು.