ಸುದ್ದಿಮೂಲ ವಾರ್ತೆ
ಮೈಸೂರು ಅ.19:ಯೋಗ ಆರೋಗ್ಯ ಹಾಗೂ ಮನಃ ಶಾಂತಿಯನ್ನು ಹೆಚ್ಚಿಸುತ್ತದೆ. ದಸರಾದಲ್ಲಿ ಯೋಗದ ಕುರಿತಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಗುರುವಾರ ನಗರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮೈಸೂರು ದಸರಾದ ಎಲ್ಲಾ ಕಾರ್ಯಕ್ರಮಗಳನ್ನು ಸರ್ಕಾರವು ಬಹಳ ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದು, ದಸರಾ ಎಂದರೆ ಕಲೆ ಸಂಸ್ಕೃತಿ ಬಿಂಬಿಸುವುದರ ಜೊತೆಗೆ ಆರೋಗ್ಯದ ನಿಟ್ಟಿನಲ್ಲಿ ಯೋಗಕ್ಕೆ ಮೈಸೂರು ದಸರಾದಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತಿದೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿ ಯೋಗ ಪ್ರದರ್ಶಿಸುತ್ತಿರುವ ಎಲ್ಲಾ ಯೋಗಪಟುಗಳಿಗೆ ಶುಭ ಹಾರೈಸುತ್ತೇನೆ ಎಂದರು.
ಮೇಯರ್ ಶಿವ ಕುಮಾರ್ ಮಾತನಾಡಿ, ದೇಶದ ಪ್ರಧಾನಿಯು ಯೋಗಕ್ಕೆ ಅತಿ ಹೆಚ್ಚು ಒತ್ತನ್ನು ನೀಡಿ ಇದರ ಕುರಿತಂತೆ ಸಂಶೋಧನೆಗೆ ಹಣಕಾಸುವನ್ನು ಬಿಡುಗಡೆ ಮಾಡಿ ಉತ್ತೇಜನ ನೀಡುತ್ತಿದ್ದಾರೆ. ಮೈಸೂರು ದಸರಾದಲ್ಲಿ ಯೋಗದ ಕುರಿತಂತೆ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ನಮ್ಮ ಹೆಮ್ಮೆ . ಯೋಗವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಡಾ.ಗಣೇಶ್ ಕುಮಾರ್, ಈ ಸ್ಪರ್ಧೆಯು 8 ವರ್ಷದ ಬಾಲಕರಿಂದ 65 ವರ್ಷದ ಪುರುಷ ಮಹಿಳೆಯರು ಭಾಗವಹಿಸುತ್ತಿದ್ದು ಸ್ಪರ್ಧಿಗಳು ನೋಂದಣಿ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅವಕಾಶ ಮಾಡಿಕೊಡಲಾಗಿತ್ತು. ಇಲ್ಲಿವರೆಗೆ 1425 ಸ್ಪರ್ಧಿಗಳು ಈಗಾಗಲೇ ನೊಂದಣಿಯಾಗಿದ್ದು ಸ್ಥಳದಲ್ಲೂ ಕೂಡ ನೊಂದಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಒಟ್ಟಾರೆ 1600 ಕೂ ಹೆಚ್ಚು ಸ್ಪರ್ಧಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸುತ್ತಿದ್ದು, ವಯೋಮಾನದ ಅನುಗುಣವಾಗಿ ವಿವಿಧ ಯೋಗ ಆಸನಗಳನ್ನು ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ. 14 ವಿವಿಧ ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದು ಪ್ರತಿ ವೇದಿಕೆಗೆ ನಾಲ್ಕು ತೀರ್ಪುಗಾರರನ್ನು ಆಯೋಜಿಸಲಾಗಿದೆ.
ಪ್ರತಿ ಸ್ಪರ್ಧಿಗೆ ತೀರ್ಪುಗಾರರು ನಿಗದಿಪಡಿಸಿರುವ ಐದು ಯೋಗಾಸನಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಅದರಲ್ಲಿ ಯಾರಿಗೆ ಅತಿ ಹೆಚ್ಚು ಅಂಕಗಳಿಸುತ್ತಾರೆ ಅವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ. ಮೊದಲು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ನಗದು ಬಹುಮಾನ ನೀಡುತ್ತಿದ್ದು ಭಾಗವಹಿಸಿದ ಸ್ಪರ್ಧಿಗಳೆಲ್ಲರಿಗೂ ಪ್ರಾತಿನಿಧ್ಯ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಉಪ ಮೇಯರ್ ಡಾ. ಜಿ ರೂಪ, ಯೋಗ ದಸರಾ ಉಪಸಮಿತಿಯ ಡಿ.ಎಂ ರಾಣಿ , ಯೋಗ ದಸರಾ ಉಪಸಮಿತಿಯ ವಿಶೇಷ ಅಧಿಕಾರಿ ಕೆ.ರಮ್ಯಾ, ಯೋಗ ದಸರಾ ಉಪಸಮಿತಿ ಕಾರ್ಯದರ್ಶಿ ಡಾ.ಪುಷ್ಪ, ಹಾಗೂ ಸಮಿತಿಯ ಎಲ್ಲಾ ಸದಸ್ಯರು ಇದ್ದರು.