ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ನ. 21 : ಗೌರಿಬಿದನೂರು ನಗರಸಭೆ ವ್ಯಾಪ್ತಿಯಲ್ಲಿ ಅಮೃತ್ ನಗರೋತ್ಥಾನ 4ರಡಿ ಸುಮಾರು 17 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ನಗರದ ವಾರ್ಡ್ ನಂ. 27ರ ಗೊಟಕನಾಪುರದಲ್ಲಿ ನಿರ್ಮಿಸಿರುವ ಚರಂಡಿ ಮತ್ತು ರಸ್ತೆ ಕಾಮಗಾರಿಗಳಿಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಭೇಟಿ ನೀಡಿ ಅಳತೆ ಮತ್ತು ಗುಣಮಟ್ಟ ಪರಿಶೀಲನೆ ನಡೆಸಿದರು.
ಈ ಯೋಜನೆಯಡಿ ಒಟ್ಟು 49 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಈ ಪೈಕಿ 19 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಬಾಕಿ 30 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಈ ಬಾಕಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಹಾಗೂ ನಗರದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ನಗರದ ಹೀರೆಬಿದನೂರಿಗೆ ಭೇಟಿ ನೀಡಿ ಅಮೃತ್ ನಗರೋತ್ಥಾನ -3 ರಡಿ ನಿರ್ಮಿಸಿದ ಚರಂಡಿ ಮತ್ತು ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಾರ್ವಜನಿಕರಿಗೆ ಒದಗಿಸುತ್ತಿರುವ ಆಹಾರದ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಪರಿಶೀಲಿಸಿ, ಅಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಿದರು. ವಾರ್ಡ್ ನಂ.23ರ ಆನಂದಪುರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳಿಗೆ ಒದಗಿಸುತ್ತಿರುವ ಕೋಳಿ ಮೊಟ್ಟೆ, ತರಕಾರಿ ಮತ್ತು ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಗುಣಮಟ್ಟದ ಆಹಾರವನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಕಾರ್ಯಪಾಲಕ ಇಂಜಿನಿಯರ್ ಮಾಧವಿ, ತಹಶೀಲ್ದಾರ್ ಮಹೇಶ್ ಪತ್ರಿ, ಪೌರಾಯುಕ್ತೆ ಗೀತಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.