ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಏ.28: ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದು, ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾಹಿತಿ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಪೂರ್ವ ಸಿದ್ದತೆಗಳ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 70 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 10,50,142 ಮತದಾರರ ಪೈಕಿ 5,19,785 ಪುರುಷರು, 5,30,251 ಮಹಿಳಾ ಮತದಾರರಿದ್ದಾರೆ. ಈ ಪೈಕಿ 30,820 ಯುವ ಮತದಾರರಿದ್ದಾರೆ ಎಂದರು.
ಮತದಾರರನ್ನು ಸೆಳೆಯಲು ಮಾದರಿ ಮತಗಟ್ಟೆಗಳನ್ನು ತೆರೆಯುತ್ತಿದ್ದು, 10 ಮಹಿಳಾ ಮತಗಟ್ಟೆಗಳು, 5 ವಿಕಲಚೇತನ ಮತಗಟ್ಟೆಗಳು, 5 ಯುವ ನೌಕರರ ಮತಗಟ್ಟೆಗಳು, 5 ಸಾಂಪ್ರದಾಯಿಕ ಮತಗಟ್ಟೆಗಳು ಹಾಗೂ 5 ಜಿಲ್ಲೆಯ ವಿಶೇಷತೆಯನ್ನು ಸಾರುವ ಮತಗಟ್ಟೆಗಳನ್ನು ತೆರೆಯುವ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡಲಾಗುತ್ತಿದೆ. ವಿಶೇಷ ಮತಗಟ್ಟೆಗಳನ್ನು ರೇಷ್ಮೆ ಉತ್ಮನ್ನಗಳು, ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗುವುದು. ಈ ಮಾದರಿ ಮತಗಟ್ಟೆಗಳಲ್ಲಿ ಆಕರ್ಷಣೀಯವಾದ ಚಿತ್ರ ಬರಹಗಳಿರಲಿವೆ ಎಂದರು.
ಮತಗಟ್ಟೆಯ ಸಿಬ್ಬಂದಿಗೆ 1ನೇ ಹಂತದಲ್ಲಿ ತರಬೇತಿಯನ್ನು ನೀಡಲಾಗಿದ್ದು, 2ನೇ ಹಂತದ ತರಬೇತಿಯನ್ನು ಮೇ 4 ರಂದು ನೀಡಲಾಗುವುದು. ಈವರೆಗೆ 15,398 ಪಿ.ಆರ್.ಓ, 1,539 ಎ.ಪಿ.ಆರ್.ಓ, 3,078 ಪಿ.ಓ ಹಾಗೂ 321 ಮೈಕ್ರೋ ವೀಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದರು.
ಹೊಸದಾಗಿ ನೊಂದಣೆಯಾಗಿರುವ ಯುವ ಮತದಾರರಿಗೆ ಮತ್ತು ನಮೂನೆ-8ರಲ್ಲಿ ಅರ್ಜಿ ಸಲ್ಲಿಸಿರುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಶೀಘ್ರ ಅಂಚೆ ಮೂಲಕ ಕಳುಹಿಸಲು ಕ್ರಮವಹಿಸಲಾಗಿದೆ. ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯಿಂದ ಮತಗಟ್ಟೆಯ ವಿವರ, ಮತದಾನದ ದಿನಾಂಕ, ಸಮಯ ಹಾಗೂ ಮತದಾರರ ವಿವರವುಳ್ಳ ಮತದಾರರ ಮಾಹಿತಿ ಚೀಟಿಯನ್ನು ಸರಬರಾಜು ಮಾಡಲಾಗಿದ್ದು, ವಿಧಾನಸಭಾ ಕ್ಷೇತ್ರವಾರು ಮರುಹಂಚಿಕೆ ಮಾಡಲಾಗಿರುತ್ತದೆ. ಈ ಮತದಾರರ ಮಾಹಿತಿ ಚೀಟಿಯನ್ನು ಮತದಾನದ ದಿನಕ್ಕಿಂತ 5 ದಿನ ಮುಂಚಿತವಾಗಿ ಎಲ್ಲಾ ಮತದಾರರಿಗೆ ಬಿ.ಎಲ್.ಓ.ಗಳ ಮುಖಾಂತರ ವಿತರಿಸಲಾಗುವುದು