ಸುದ್ದಿಮೂಲ ವಾರ್ತೆ
ತುಮಕೂರು, ಅ.25: ಜಿಲ್ಲೆಯಲ್ಲಿರುವ ಅನಕ್ಷರಸ್ಥರ ನಿಖರ ಮಾಹಿತಿಯನ್ನು ಸಂಗ್ರಹಿಸಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಡಯಟ್ ಉಪನಿರ್ದೇಶಕ ಕೆ.ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಂತದ ಸಾಕ್ಷರತಾ ಅನುಷ್ಠಾನ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅನಕ್ಷರಸ್ಥರ ಮಾಹಿತಿಗಾಗಿ
ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ನಡೆಸಬೇಕು. ಸಮೀಕ್ಷೆಯಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಸ್ಥರನ್ನಾಗಿ ಮಾಡುವ ಮೂಲಕ ಜಿಲ್ಲೆಯ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು ಮಾತನಾಡಿ, ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪಂಚಾಯತಿಗಳಲ್ಲಿ ಸಾಕ್ಷರತಾ ಆಂದೋಲನ ಹಮ್ಮಿಕೊಳ್ಳಬೇಕು. ಸಂವಿಧಾನದಲ್ಲಿ ಕಲ್ಪಿಸಿರುವ ಮೂಲಭೂತ ಸೌಲಭ್ಯ, ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಅನಕ್ಷರಸ್ಥರಿಗೆ ಅರಿವು ಮೂಡಿಸಬೇಕು. ಮಹಿಳೆಯರು, ವಿಕಲಚೇತನರು, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ, ತೃತೀಯ ಲಿಂಗಿ, ಹಿಂದುಳಿದ ವರ್ಗ ಸೇರಿದಂತೆ ಇತರೆ ಸಮುದಾಯದ ಅನಕ್ಷರಸ್ಥರು, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರನ್ನು ಅಕ್ಷರಸ್ಥರನ್ನಾಗಿ ಮಾಡಲು ಆದ್ಯತೆ ನೀಡಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲಾ ಡಯಟ್ ಉಪನಿರ್ದೇಶಕ ಕೆ.ಮಂಜುನಾಥ್ ಮಾತನಾಡಿ,
ಕೇಂದ್ರ ಸರ್ಕಾರವು ನವಭಾರತ ಸಾಕ್ಷರತಾ ಕಾರ್ಯಕ್ರಮದಡಿ ಮೊಬೈಲ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರಲ್ಲದೆ, ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ.75.14ರಷ್ಟಿದ್ದು, ಜಿಲ್ಲಾ ವಲಯದ ಲಿಂಕ್ ಕಾರ್ಯಕ್ರಮ, ರಾಜ್ಯ ವಲಯದ ಸಾವಿರ ಸಂಪೂರ್ಣ
ಸಾಕ್ಷರತಾ ಗ್ರಾಮ ಪಂಚಾಯತಿ ಕಾರ್ಯಕ್ರಮ ಹಾಗೂ ಕೇಂದ್ರ ವಲಯದ ನವಭಾರತ ಸಾಕ್ಷರತಾ ಕಾರ್ಯಕ್ರಮ ಸೇರಿದಂತೆ 3 ಕಾರ್ಯಕ್ರಮಗಳಡಿ ಹಂತ-ಹಂತವಾಗಿ ಸಾಕ್ಷರತಾ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಲಿಂಕ್ ಕಾರ್ಯಕ್ರಮದಡಿ ತುಮಕೂರು ತಾಲ್ಲೂಕಿನ ಬುಗುಡನಹಳ್ಳಿ ಹಾಗೂ ಬೆಳ್ಳಾವಿ, ಕೊರಟಗೆರೆ ತಾಲ್ಲೂಕಿನ ಬೊಮ್ಮಲದೇವಿಪುರ, ಮಧುಗಿರಿ ತಾಲ್ಲೂಕಿನ ದಬ್ಬೆಘಟ್ಟ ಗ್ರಾಮಪಂಚಾಯತಿ ಸೇರಿ ಒಟ್ಟು 6827 ಸಂಪೂರ್ಣ ಸಾಕ್ಷರತಾ ಗ್ರಾಮ ಪಂಚಾಯತಿ ಕಾರ್ಯಕ್ರಮದಡಿ ತುಮಕೂರು ವಿಭಾಗದ ತುಮಕೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು ಹಾಗೂ ತುರುವೇಕೆರೆ ತಾಲ್ಲೂಕಿನ 24 ಗ್ರಾಮಪಂಚಾಯತಿಗಳ 13618, ಮಧುಗಿರಿ ವಿಭಾಗದ 13 ಪಂಚಾಯತಿಗಳ 9861 ಹಾಗೂ ಎನ್ಐಎಲ್ಪಿ ಕಾರ್ಯಕ್ರಮದಡಿ ಜಿಲ್ಲೆಯ 43 ಪಂಚಾಯತಿಗಳ 57138 ಅನಕ್ಷರಸ್ಥರನ್ನು ಸಾಕ್ಷರತರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಉಪನಿರ್ದೇಶಕ ಗಂಗಾಧರ್, ಶಾಲಾ ಶಿಕ್ಷಣ ಇಲಾಖೆ (ಆಡಳಿತ)ಉಪನಿರ್ದೇಶಕ ರಂಗಧಾಮಯ್ಯ, ತಹಶೀಲ್ದಾರ್ ಸಿದ್ದೇಶ್, ತುಮಕೂರು ಶೈಕ್ಷಣಿಕ ಜಿಲ್ಲೆಯ ವಯಸ್ಕರ ಶಿಕ್ಷಣಾಧಿಕಾರಿ ಲಕ್ಷ್ಮೀ ಜನಾರ್ಧನ್ ಹಾಗೂ ಕಾರ್ಯಕ್ರಮ ಸಹಾಯಕಿ ಸಿ.ಎಂ. ಲಕ್ಷಿ
ಮಧುಗಿರಿ ವಯಸ್ಕರ ಶಿಕ್ಷಣಾಧಿಕಾರಿ ನರಸಿಂಹಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ವಾರ್ತಾ ಇಲಾಖೆಯ ಆರ್.ರೂಪಕಲಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.