ಸುದ್ದಿಮೂಲ ವಾರ್ತೆ
ತುಮಕೂರು, ಅ.07: ಜಿಲ್ಲೆಯಲ್ಲಿ ಅ. 9 ರಿಂದ 14 ರವರೆಗೆ ಹಮ್ಮಿಕೊಂಡಿರುವ ಮಿಷನ್ ಇಂದ್ರಧನುಷ್ 5.0 ಅಭಿಯಾನದಲ್ಲಿ ಲಸಿಕೆ ನಿರಾಕರಿಸುವ ಕುಟುಂಬಗಳ ಮನವೊಲಿಸಲು ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ದಡಾರ-ರುಬೆಲ್ಲಾ ಲಸಿಕಾಕರಣದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್ ಮಾಹೆಯಲ್ಲಿ ಮೊದಲ ಹಾಗೂ 2ನೇ ಸುತ್ತಿನ ಲಸಿಕಾಕರಣದಲ್ಲಿ ಶೇ.100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿರುವಂತೆ 3ನೇ ಸುತ್ತಿನಲ್ಲೂ ಗುರಿ ಮೀರಿ ಸಾಧಿಸಬೇಕೆಂದು ನಿರ್ದೇಶನ ನೀಡಿದರು.
ಈ ಲಸಿಕಾಕರಣದಲ್ಲಿ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭಿಣಿ ಸ್ತೀಯರು ಲಸಿಕೆಯಿಂದ ವಂಚಿತರಾಗದಂತೆ ನಿಗಾವಹಿಸಬೇಕು. ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಅಂಗನವಾಡಿಗಳಲ್ಲಿ ಉಚಿತವಾಗಿ ಲಸಿಕೆ ನೀಡುವ ಬಗ್ಗೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಟಾಂಟಾಂ ಮಾಡಲು ಕ್ರಮವಹಿಸಬೇಕು. ಕಟ್ಟಡ ನಿರ್ಮಾಣ ಸ್ಥಳ, ತೋಟದ ಮನೆ, ವಲಸಿಗರ ಮನೆ ಸೇರಿ ಅಪಾಯದಂಚಿನ ಪ್ರದೇಶಗಳಿಗೆ ಭೇಟಿ ನೀಡಿ ಗರ್ಭಿಣಿ ಮತ್ತು ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ಸೂಚಿಸಿದರು.
ಹೊಸದಾಗಿ ಮಕ್ಕಳು ಶಾಲೆಗೆ ನೋಂದಣಿಯಾಗುವ ಸಮಯದಲ್ಲಿ ಈ ಹಿಂದೆ ಪಡೆದಿರುವ ಲಸಿಕೆಗಳ ಬಗ್ಗೆ ಪರಿಶೀಲಿಸಿ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರನ್ನು ಪ್ರೇರೇಪಿಸಬೇಕು. ರೈಲ್ವೆ ಹಳಿಗಳ ಪಕ್ಕದಲ್ಲಿ ವಾಸವಿರುವ ವಲಸೆ ಗರ್ಭಿಣಿ ಮತ್ತು 5 ವರ್ಷದೊಳಗಿನ ಮಕ್ಕಳಿಗೂತಪ್ಪದೆ ಲಸಿಕೆ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಸಿ.ಆರ್.ಮೋಹನ್ ಮಾತನಾಡಿ, ಅಕ್ಟೋಬರ್ 9ರಿಂದ 14ರವರೆಗೆ ಜಿಲ್ಲಾದ್ಯಂತ ಹಮ್ಮಿಕೊಂಡಿರುವ 3ನೇ ಸುತ್ತಿನ ಇಂದ್ರಧನುಷ್ ಲಸಿಕಾಕರಣದಲ್ಲಿ 0-2 ವರ್ಷದೊಳಗಿನ 3309, 2-5 ವರ್ಷದೊಳಗಿನ 56 ಹಾಗೂ 719 ಗರ್ಭಿಣಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 642 ಲಸಿಕಾ ಸತ್ರಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇಂದ್ರಧನುಷ್ ಅಭಿಯಾನ ಕುರಿತು ಆರೋಗ್ಯ ಇಲಾಖೆ ಹೊರತಂದಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.