ಬೆಂಗಳೂರು:ನಮ್ಮ ಸರ್ಕಾರದ ಸಚಿವರು ಶಾಸಕರು ಲಂಚ ಕೇಳಿಲ್ಲ ಎಂದು ಕೇವಲ ಕೆಂಪಣ್ಣ ಮಾತ್ರವಲ್ಲ, ಇತರೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕೇವಲ ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ‘ಕಮಿಷನ್ ಕೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ’ ಎಂಬ ಹೇಳಿಕೆ ಬಗ್ಗೆ ಶನಿವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
“ನಾವು ರಾಜ್ಯದ ಜನರಿಗೆ ದಕ್ಷ, ಭ್ರಷ್ಟಾಚಾರರಹಿತ ಆಡಳಿತ ನೀಡುವ ವಚನ ನೀಡಿ ಅಧಿಕಾರಕ್ಕೆ ಬಂದಿದ್ದು, ಪಾರದರ್ಶಕವಾಗಿ ಆಡಳಿತ ಮಾಡಲು ಬದ್ಧರಾಗಿದ್ದೇವೆ. ಕರ್ನಾಟಕವನ್ನು ದಕ್ಷ ಆಡಳಿತ ರಾಜ್ಯವಾಗಿ ಮಾಡುವುದು ನಮ್ಮ ಕನಸು. ಇದಕ್ಕಾಗಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ.
ನಾನು, ಸಿದ್ದರಾಮಯ್ಯ ಅವರು ನಮ್ಮದೇ ಆದ ರಾಜಕೀಯ ಹಿನ್ನೆಲೆ ಹೊಂದಿದ್ದೇವೆ. ಕೆಂಪಣ್ಣ ಅವರು ಬಹಳ ಹಿರಿಯ ಹಾಗೂ ಗೌರವಾನ್ವಿತ ವ್ಯಕ್ತಿ. ಅವರು ಬಹಳ ಜವಾಬ್ದಾರಿ ಹೊಂದಿದ್ದಾರೆ. ಅವರು ಬಿಜೆಪಿ ಸರ್ಕಾರ ಬಾಕಿ ಉಳಿಸಿರುವ ಬಿಲ್ ಪಾವತಿ ಬಗ್ಗೆ ಮನವಿ ಮಾಡಲು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಸರ್ಕಾರ ಯಾಕೆ ಬಿಲ್ ಪಾವತಿ ಮಾಡಲಿಲ್ಲ ಎಂಬುದು ನನ್ನ ಪ್ರಶ್ನೆ.
ಈಗ ನಮ್ಮ ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾಮಗಾರಿಗಳ ತನಿಖೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಬಿಲ್ ಪಾವತಿ ಮಾಡಲಾಗುವುದು. ಯಾವುದೇ ಗುತ್ತಿಗೆದಾರರಿಗೆ ಕಿರುಕುಳ ನೀಡುವುದು ನಮ್ಮ ಉದ್ದೇಶವಲ್ಲ.
ಕೆಂಪಣ್ಣ ಮಾತ್ರ ಅಲ್ಲ, ಇತರೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸರ್ಕಾರದ ಯಾವುದೇ ಸಚಿವರು ಲಂಚ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ವಿಚಾರ ರಾಜಕೀಯ ಮಾಡಿ, ಗುತ್ತಿಗೆದಾರರನ್ನು ಬಳಸಿಕೊಂಡು ಅಶೋಕ್, ಅಶ್ವತ್ ನಾರಾಯಣ, ಗೋಪಾಲಯ್ಯ ಅವರು ತಮ್ಮ ತಿಮಿಂಗಳಗಳ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಈ ಆರೋಪ ಮಾಡುತ್ತಿದ್ದಾರೆ.”
ಗ್ಯಾರಂಟಿ ಯೋಜನೆ ಜಾರಿ ಅರಗಿಸಿಕೊಳ್ಳಲಾಗದೆ ಅಶೋಕ್, ಅಶ್ವತ್ಥ್ ನಾರಾಯಣ ಅಪಪ್ರಚಾರ
ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, “ಅವರಿಗೆ ನಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಕ್ಷೇತ್ರದ ಮಹಿಳೆಯರು ತಿಂಗಳಿಗೆ 2 ಸಾವಿರ ಪ್ರೋತ್ಸಾಹ ಧನ, ಉಚಿತ ಬಸ್ ಪ್ರಯಾಣ ಮಾಡುತ್ತಿದ್ದು, ಉಚಿತ ಅಕ್ಕಿ ಹಾಗೂ ವಿದ್ಯುತ್ ಪಡೆಯುತ್ತಿದ್ದು, ನೀವು ಅಧಿಕಾರದಲ್ಲಿದ್ದಾಗ ಇಂತಹ ಒಂದು ಕಾರ್ಯಕ್ರಮ ಮಾಡಲಿಲ್ಲ ಎಂದು ಕೇಳುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಅಶೋಕ್, ಅಶ್ವತ್ಥ್ ನಾರಾಯಣ ಅವರು ಇಂತಹ ಸುಳ್ಳು ಆರೋಪ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ” ಎಂದು ತಿಳಿಸಿದರು.
ಬಿಜೆಪಿ ನಾಯಕರ ಹಗರಣದ ಬಗ್ಗೆ ದಾಖಲೆ ಇಟ್ಟು ಮಾತನಾಡುತ್ತೇನೆ:
ಯಾವುದೇ ಸಚಿವರು ಕಿಕ್ ಬ್ಯಾಕ್ ಕೇಳಿಲ್ಲ ಎಂಬ ಕೆಂಪಣ್ಣ ಅವರ ಸ್ಪಷ್ಟನೆ ಹಾಗೂ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಅಶೋಕ್ ಅವರ ಕಿಕ್ ಬ್ಯಾಕ್, ಬೇರೆಯವರ ಕಿಕ್ ಬ್ಯಾಕ್ ಬಗ್ಗೆ ಚರ್ಚೆ ಮಾಡಲು ಬೇರೆ ಸಮಯ ಇದೆ. ಅವರು ಕಣ್ಣು ಮುಚ್ಚಿ ಮೂರೂವರೆ ವರ್ಷಗಳ ಕಾಲ ಸರ್ಕಾರ ಮಾಡಿದರೆ? ನನಗೆ ಎಲ್ಲವೂ ಗೊತ್ತಿದೆ. ನಾನು ದಾಖಲೆ ಸಮೇತ ಮಾತನಾಡುತ್ತೇನೆ. ಯಾವುದೇ ಬಿಲ್ ಬಾಕಿ ಇದ್ದರೂ ಅವುಗಳ ಪಾವತಿ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಿರುವಾಗ ಕಿಕ್ ಬ್ಯಾಕ್ ಕೇಳಲು ಹೇಗೆ ಸಾಧ್ಯ? ಅವರು ಅಧಿಕಾರದಲ್ಲಿದ್ದಾಗ ಯಾಕೆ ಬಿಲ್ ಪಾವತಿ ಮಾಡಲಿಲ್ಲ? ಅವರ ಕಾರ್ಯವೈಖರಿಯನ್ನು ನಾನು ಶೀಘ್ರದಲ್ಲೇ ದಾಖಲೆ ಸಮೇತ ವಿವರಿಸುತ್ತೇನೆ” ಎಂದು ತಿಳಿಸಿದರು.
ತಮ್ಮ ಮೇಲಿನ ಆರೋಪದ ಬಗ್ಗೆ ಕೇಳಿದಾಗ, “ನಾನು ಸಾರ್ವಜನಿಕ ಜೀವನದಲ್ಲಿರುವವನು. ನನಗೆ ನನ್ನ ಜವಾಬ್ದಾರಿ ಬಗ್ಗೆ ಅರಿವಿದೆ. ಬಿಜೆಪಿ ನಾಯಕರ ಅನೇಕ ಹಗರಣಗಳಿವೆ. ಅವರ ಹಗರಣ ಸಾಬೀತು ಮಾಡಲಿದ್ದೇನೆ. ಹೀಗಾಗಿ ನಾವು ತನಿಖೆಗೆ ಆದೇಶ ನೀಡಿದ್ದೇನೆ. ಅವರು ಸರ್ಕಾರದಲ್ಲಿದ್ದಾಗ ನಾವು ಮಲಗಿರಲಿಲ್ಲ. ಅವರು ಏನೆಲ್ಲಾ ಮಾಡಿದ್ದಾರೆ ನಮಗೆ ಗೊತ್ತಿದೆ” ಎಂದು ಹೇಳಿದರು.
ತನಿಖೆಗೂ ಮುನ್ನ ಅಗ್ನಿ ಅವಘಡದ ಬಗ್ಗೆ ಅಂತಿಮ ತೀರ್ಮಾನ ಬೇಡ:
ಇನ್ನು ನಿನ್ನೆ ನಡೆದ ಗುಣಮಟ್ಟ ಪರಿಶೀಲನಾ ಪ್ರಯೋಗಾಲಯ ಅಗ್ನಿ ದುರಂತದ ಬಗ್ಗೆ ಕೇಳಿದಾಗ, “ಈ ದುರ್ಘಟನೆ ಬಗ್ಗೆ ನಾನು ತನಿಖೆಗೆ ಆದೇಶಿಸಿದ್ದೇನೆ. ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಹಾಗೂ ಚುನಾಯಿತ ಪ್ರತಿನಿಧಿಗಳ ತಂಡಗಳಿಂದ ಈ ಪ್ರಕರಣದ ವಿಚಾರಣೆಗೆ ಆದೇಶಿಸಿದ್ದೇನೆ.
ಈ ಪ್ರಯೋಗಾಲಯ ಇದ್ದ ಜಾಗ ಸೂಕ್ತವಾಗಿರಲಿಲ್ಲ. ಇಂತಹ ಪ್ರಯೋಗಾಲಯಗಳನ್ನು ಈ ಜಾಗದಲ್ಲಿ ಇಟ್ಟಿರುವುದು ತಪ್ಪು. ಎಲ್ಲಾದರೂ ಮುಕ್ತ ಪ್ರದೇಶದಲ್ಲಿ ಇಡಬೇಕು. ಇದೆಲ್ಲದರ ಬಗ್ಗೆ ತನಿಖೆ ಮುಗಿದು ವರದಿ ಬಂದ ನಂತರ ನಾನು ಇನ್ನಷ್ಟು ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದರು.
ಈ ಹಿಂದೆ ಇಂತಹ ಅಗ್ನಿ ದುರಂತ ನಡೆದು ಅನೇಕ ಫೈಲ್ ನಾಶ ಆಗಿದ್ದವು ಎಂದು ಕೇಳಿದಾಗ, “ಈ ಹಿಂದೆ ಇಂತಹ ಘಟನೆ ನಡೆದು, ಫೈಲ್ ಗಳನ್ನು ಮುಚ್ಚಿಹಾಕಲು ಸುತ್ತಿರುವ ಉದಾಹರಣೆಗಳಿವೆ. ಈ ಬಾರಿ ದುರಂತದಲ್ಲಿ ಫೈಲ್ ಗಳಿಗೆ ಯಾವುದೇ ಹಾನಿ ಆಗಿಲ್ಲ. ಅವುಗಳನ್ನು ಬಹಳ ಜಾಗರೂಕತೆಯಿಂದ ಸ್ಥಳಾಂತರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಪಕ್ಷದ ಅಧಿಕೃತ ಖಾತೆಯಿಂದ ಇದು ಪೂರ್ವನಿಯೋಜಿತ ಕೃತ್ಯ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಆ ಆರೋಪ ಹಿಂಪಡೆಯುತ್ತೇನೆ. ಈ ಪ್ರಕರಣದ ತನಿಖೆ ಮುಗಿಯುವವರೆಗೂ ಯಾವುದೇ ನಿರ್ಧಾರಕ್ಕೆ ಬರುವುದು ಬೇಡ. ತನಿಖೆ ಮುಗಿಯಲಿ. ನಂತರ ತೀರ್ಮಾನ ಮಾಡೋಣ” ಎಂದು ತಿಳಿಸಿದರು.
ಬಿಬಿಎಂಪಿಯಲ್ಲಿ ದಾಖಲೆಗಳ ರಕ್ಷಣೆ ಬಗ್ಗೆ ಕೇಳಿದಾಗ, “ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಿನ್ನೆ ರಾತ್ರಿ ಮಧ್ಯರಾತ್ರಿ ವರೆಗೂ ಬಿಬಿಎಂಪಿ ಕಚೇರಿಯಲ್ಲಿದ್ದು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ” ಎಂದು ತಿಳಿಸಿದರು.