ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, ಈಗಾಗಲೇ ಬಬಿಎಂಪಿ ಹಾಗೂ ಬಿಡಿಎ ಮೂಲಕ ಎಕ್ಸ್ ಪ್ರೆಷನ್ ಆಫ್ ಇಂಟರೆಸ್ಟ್ ಮೂಲಕ ಜಾಗತಿಕ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಲ್ಲಿಕೆಗೆ ಆಗಸ್ಟ್ 8 ಕೊನೇ ದಿನವಾಗಿದೆ. ಎಂದು ತಿಳಿಸಿದರು.
ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಿನ್ನೆ ಭೇಟಿ ಮಾಡಿ ಚರ್ಚಿಸಿದ್ದೇನೆ. ಬೆಂಗಳೂರಿನಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಈ ರಸ್ತೆಗಳ ಮೂಲಕ ಬೆಂಗಳೂರಿಗೆ ಹೆಚ್ಚಿನ ವಾಹನಗಳು ಆಗಮಿಸಿ ಸಂಚಾರ ದಟ್ಟಣೆಗೆ ಕಾರಣವಾಗಿವೆ. ಈ ಸಂಚಾರ ದಟ್ಟಣೆ ನಿವಾರಣೆಗೆ ಕೇಂದ್ರ ಹೆದ್ದಾರಿ ಪ್ರಾಧಿಕಾರದ ಮೂಲಕ ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವರ ಜತೆ ಚರ್ಚಿಸಿದ್ದೇನೆ.
ನಮ್ಮ ವಿಚಾರಕ್ಕೆ ನಿತಿನ್ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅವರು ತಮ್ಮ ಸಲಹೆಯನ್ನೂ ನೀಡಿದ್ದಾರೆ. ಸುರಂಗ ರಸ್ತೆ, ಫ್ಲೈ ಓವರ್ ಅಥವಾ ಇತರೆ ಮಾದರಿ ಯೋಜನೆ ಜಾರಿ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ತಿಳಿಸಿದ್ದಾರೆ ಎಂದು ಹೇಳಿದರು.
ಈಗಾಗಲೇ ಜುಲೈ 14 ರಂದ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿಯಿಂದ ಎಕ್ಸ್ ಪ್ರೆಷನ್ ಆಫ್ ಇಂಟರೆಸ್ಟ್ ಮೂಲಕ ಜಾಗತಿಕ ಟೆಂಡರ್ ಕರೆದಿದ್ದೇವೆ. ಆಗಸ್ಟ್ 8 ರಂದು ಕೊನೇ ದಿನವಾಗಿದೆ.
ಸಂಚಾರ ದಟ್ಟಣೆ ನಿಯಂತ್ರಣ ಮಾಡಿ ಬೆಂಗಳೂರಿನ ಚಿತ್ರಣ ಬದಲಿಸಬೇಕಿದೆ. ದೆಹಲಿ, ಮುಂಬೈ ನಗರಗಳಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದ್ದರೂ, ಬೆಂಗಳೂರನ್ನು ಜಾಗತಿಕ ನಗರ ಎಂದು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಕೇವಲ ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಮಾತ್ರ ಹೆಚ್ಚಾಗಿ ಮಾತನಾಡುತ್ತಾರೆ. ಸಂಚಾರ ದಟ್ಟಣೆ ನಿವಾರಣೆಗೆ ಕಾರ್ಯಕ್ರಮ ರೂಪಿಸಲು ನಾವು ಸಜ್ಜಾಗುತ್ತಿದ್ದು, ಈಗಾಗಲೇ ಚೀನಾ, ಸಿಂಗಾಪುರ, ಇಸ್ರೇಲ್ ಸೇರಿದಂತೆ ಹತ್ತಾರು ಕಂಪನಿಗಳು ಬಂದು ತಮ್ಮ ವಿಚಾರ ತಿಳಿಸಿವೆ. ಈ ಕಂಪನಿಗಳಿಗೆ ಈಗಾಗಲೇ ಎಕ್ಸ್ ಪ್ರೆಷನ್ ಆಫ್ ಇಂಟರೆಸ್ಟ್ ಮೂಲಕ ಕರೆಯಲಾಗಿರುವ ಟೆಂಡರ್ ನಲ್ಲಿ ಭಾಗವಹಿಸಿ, ಇಡೀ ಯೋಜನೆ ಹೇಗೆ ಜಾರಿ ಮಾಡಬಹುದು ಎಂದು ವಿವರಿಸುವಂತೆ ತಿಳಿಸಿದ್ದೇವೆ ಎಂದರು.
ಸಮಸ್ಯೆ ಬಗೆಹರಿಸಲು ಪ್ರಯತ್ನ:
ನೀರು ಹಂಚಿಕೆ ವಿವಾದ ಸಂಬಂಧ ಕಾನೂನು ತಜ್ಞರ ಜತೆ ಸಭೆ ಮಾಡಲಾಗಿದೆ. ಈವರೆಗೂ ನಾವು ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಮಹದಾಯಿ, ಕಾವೇರಿ, ಕೃಷ್ಣಾ ನದಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ವಿಚಾರವಾಗಿ ಮಾಹಿತಿ ಪಡೆದಿದ್ದೇನೆ. ಉಳಿದ ವಿಚಾರವನ್ನು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಉಳಿದ ನಿರ್ದೇಶನ ನೀಡಲಾಗುವುದು. ನಮಗೆ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ. ಆದಷ್ಟು ಬೇಗ ಎಲ್ಲಾ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.