ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ 26 : ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಮಾದಕ ವಸ್ತು ವಿರೋಧಿ ದಿನದಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶಾಲಾ ಮಕ್ಕಳೊಂದಿಗೆ ಜಾಗೃತಿ ಜಾಥಾದಲ್ಲಿ ಭಾಗವಹಿಸಿದರು. ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೂ ಜಾಗೃತಿ ಜಾಥಾದಲ್ಲಿ ಮಕ್ಕಳ ಜತೆ ಹೆಜ್ಜೆ ಹಾಕಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಮಕ್ಕಳಲ್ಲಿ ಡ್ರಗ್ಸ್ ಸೇವನೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಮಾತಾಡಿದರು. ಡ್ರಗ್ಸ್ ವಿರುದ್ಧ ಹೋರಾಡಲು ಮಕ್ಕಳಿಗೆ ಉತ್ತೇಜನ ತುಂಬಿದರು.
ಮಾದಕವಸ್ತುಗಳು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗಲಿದೆ. ಹೀಗಾಗಿ ಇದನ್ನು ಕೊನೆಗೊಳಿಸಲು ನಾವೆಲ್ಲರೂ ಮಕ್ಕಳು, ಯುವಜನಾಂಗದಲ್ಲಿ ಜಾಗೃತಿ ಮೂಡಿಸುವ ದಿನ ಆಚರಣೆ ಮಾಡುತ್ತಿದ್ದೇವೆ. ನಾನು ನಿಮ್ಮ ಜೊತೆ ಜಾಥಾದಲ್ಲಿ ಹೆಜ್ಜೆ ಹಾಕುತ್ತೇನೆ. ಈ ಜಾಥಾ ನಿಮ್ಮ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯಲಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಜಾಥಾದಲ್ಲಿ ಹೆಜ್ಜೆ ಹಾಕಿದ್ದೇನೆ ಎಂದು ನೀವು ಸದಾ ಸ್ಮರಿಸುತ್ತೀರಿ ಎಂದರು.
ಕಳೆದ ಮೂರು ವರ್ಷಗಳಿಂದ ಅನೇಕ ಪಾದಯಾತ್ರೆಗಳಲ್ಲಿ ಪಾಲ್ಗೊಂಡಿದ್ದೇನೆ. ನೀರಿಗಾಗಿ ನಡಿಗೆ, ಸ್ವಾತಂತ್ರ್ಯ ನಡಿಗೆ, ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದೇವೆ. ಡ್ರಗ್ಸ್ ಸೇವನೆ ಮಾಡಿದರೆ ನೋವು, ಸಾವು ಎರಡೂ ಬರುತ್ತದೆ. ಹೀಗಾಗಿ ಇದರ ಬಗ್ಗೆ ಬಹಳ ಎಚ್ಚರಿಕೆ ಇರಬೇಕು ಎಂದರು.