ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ. 13:ನೀವು ಸರಕಾರದ ಮುಖ. ನಿಮ್ಮ ಕಾರ್ಯವೈಖರಿ ಸರಕಾರದ ಹಣೆಬರಹ ನಿರ್ಧರಿಸುತ್ತದೆ. ನೀವು ಸರಿಯಾಗಿ ಕೆಲಸ ಮಾಡದಿದ್ದರೆ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ರೆವಿನ್ಯು ಇನ್ಸ್ಪೆಕ್ಟರ್ಗಳು, ಪಿಡಿಓಗಳು ಕಾರ್ಯವೈಖರಿ ಸರಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅವರ ಬಗ್ಗೆ ಗಮನ ಹರಿಸಿ.
ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡೋದು ಬೇಡ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಸಹಕಾರ ನೀಡಿದ್ದೀರಿ. ಅದಕ್ಕೆ ಅಭಿನಂದನೆಗಳು.
ಶೇಕಡಾ 70 ರಷ್ಟು ಅಧಿಕಾರಿಗಳು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಲ್ಲಿ ಉಳಿದುಕೊಂಡು ಕೆಲಸ ಮಾಡುತ್ತಿಲ್ಲ. ಇದರಿಂದ ಅವರು ಜನರಿಗೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದಲೂ ಸರಕಾರಕ್ಕೆ ಕೆಟ್ಟ ಹೆಸರು. ಸರಕಾರದ ಕೈಪಿಡಿ ನಿಯಮಗಳನ್ನು ಪಾಲಿಸಿ.
ಅಧಿಕಾರಿಗಳಿಗೆ ಸಿಇಓ ಗಳು ಬದ್ಧತೆ ನಿಗದಿ ಮಾಡಬೇಕು. 15 ದಿನದೊಳಗೆ ಅಧಿಕಾರಿಗಳು ಕೆಲಸದ ಕೇಂದ್ರ ಸ್ಥಳದಲ್ಲಿ ವಾಸ್ತವ್ಯ ಹೂಡಿರುವ ವಿಳಾಸದ ಡೈರಿ ಮಾಡಿ ಸಾರ್ವಜನಿಕರ ಗಮನಕ್ಕೆ ತರಬೇಕು. ಕೇಂದ್ರ ಸ್ಥಳದಲ್ಲಿ ಉಳಿಯಲು ಆಗದವರು ಜಾಗ ಖಾಲಿ ಮಾಡಬೇಕು.
ಭ್ರಷ್ಟಾಚಾರಕ್ಕೆ ಆಸ್ಪದ ಕೊಡಬೇಡಿ. ಆರ್ ಟಿ ಐ ದುರ್ಬಳಕೆಗೂ ಅವಕಾಶ ಕೊಡಬೇಡಿ.
ನಿಮ್ಮ ಮೇಲೆ ಹೆಚ್ಚು ನಿರೀಕ್ಷೆ ಇದೆ. ನರೇಗಾ ಹಣ ಸದ್ಭಳಕೆ ಮಾಡಿ. ಸಮರ್ಪಕ ಬಳಕೆಗೆ ಕ್ರಿಯಾ ಯೋಜನೆ ತಯಾರಿಸಿ. ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತನ್ನಿ.
ಸಿ ಎಸ್ ಆರ್ ಫಂಡ್ ಸದ್ಬಳಕೆಗೆ ಶ್ರಮಿಸಿ. ಮೂರು ಗ್ರಾಮ ಪಂಚಾಯಿತಿಗೆ ಒಂದು ಪಬ್ಲಿಕ್ ಮಾದರಿ ಶಾಲೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸಿ ಎಸ್ ಆರ್ ಫಂಡ್ ನಿಂದ ಕಟ್ಟಡ ಕಟ್ಟಿಕೊಡುತ್ತಾರೆ. ಪಬ್ಲಿಕ್ ಶಾಲೆಗಳ ಆಡಳಿತ ಮಂಡಳಿ ದತ್ತು ತೆಗೆದುಕೊಂಡು ಬೋಧನೆಗೆ ವ್ಯವಸ್ಥೆ ಮಾಡಿಕೊಡಲಿವೆ.
ರಾಜ್ಯದ ಕೆಲವು ಉದ್ಯಮಗಳು ಸಿ ಎಸ್ ಆರ್ ಫಂಡ್ ಅನ್ನು ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಿವೆ. ಅದನ್ನು ತಡೆದು ನಮ್ಮಲ್ಲೇ ಬಳಕೆ ಮಾಡಲು ನೀವೆಲ್ಲರೂ ನಿಗಾ ವಹಿಸಬೇಕು.